ನರೇಗಲ್ಲ ಪಪಂ ಎರಡೂ ಹುದ್ದೆಗಳು ಸಾಮಾನ್ಯ ವರ್ಗಕ್ಕೆ

07 NRL STORY
Published on

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಒಂದು ವರ್ಷ ಮೂರು ತಿಂಗಳಿನಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಮೀಸಲಾತಿ ಸೋಮವಾರ ಪ್ರಕಟವಾಗಿದ್ದು, ಎರಡೂ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ರಾಜಕೀಯ ಚಟುವಟಿಕೆ ಗೆರಿಗೆದರಿವೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿ 2023ರ ಮೇ 6ಕ್ಕೆ ಪೂರ್ಣಗೊಂಡಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿ ಮಾಡಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಕೆಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಮೀಸಲಾತಿ ಸಂಬಂಧ ಇದ್ದ ಎಲ್ಲ ಪ್ರಕರಣಗಳನ್ನೂ ಕೋರ್ಟ್ ಇತ್ಯರ್ಥ ಮಾಡಿದ್ದು, ಅಂದು ರಾಜ್ಯ ಸರ್ಕಾರ ನಿಗದಿ ಮಾಡಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಕೋರ್ಟ್ ಎತ್ತಿ ಹಿಡಿದಿತ್ತು. ಕೋರ್ಟ್ ಸಮ್ಮತಿ ದೊರೆತ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ.
ನರೇಗಲ್ಲ ಪಟ್ಟಣ ಪಂಚಾಯಿತಿಯ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 17 ಸದಸ್ಯ ಬಲದ ನರೇಗಲ್ಲ ಪ.ಪಂನಲ್ಲಿ 12 ಬಿಜೆಪಿ 2 ಪಕ್ಷೇತರ, 3 ಕಾಂಗ್ರೆಸ್ ಸದಸ್ಯರನ್ನು ಹೊಂದಿದ್ದು, ಪಕ್ಷೇತರರ ಪೈಕಿ ಒಬ್ಬರು ಕಾಂಗ್ರೆಸ್ ಇನ್ನೊಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ 13 ಕಾಂಗ್ರೆಸ್ 4 ಸದಸ್ಯ ಬಲ ಹೊಂದಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತವಿದೆ.
ಮೊದಲ ಅವಧಿಯಲ್ಲಿ 15 ತಿಂಗಳು ಅಧ್ಯಕ್ಷೆಯಾಗಿ 16ನೇ ವಾರ್ಡ್‌ನ ಸದಸ್ಯೆ ಅಕ್ಕಮ್ಮ ಮಣ್ಣೊಡ್ಡರ ಹಾಗೂ ಉಪಾಧ್ಯಕ್ಷರಾಗಿ 17 ವಾರ್ಡ್‌ನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಹಾಗೂ ಇನ್ನುಳಿದ 15 ತಿಂಗಳಲ್ಲಿ 6ನೇ ವಾರ್ಡ್‌ನ ವಿಜಯಲಕ್ಷ್ಮೀ ಚಲವಾದಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ. 4ರ ಸದಸ್ಯ ಶ್ರೀಶೈಲಪ್ಪ ಬಂಡಿಹಾಳ ಅಧಿಕಾರ ಅನುಭವಿಸಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಅನುಭವಿಸಿದ ಇಬ್ಬರನ್ನು ಬಿಟ್ಟು ಉಳಿದೆಲ್ಲ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದು, ಪಕ್ಷದ ನಾಯಕರ ಬೆನ್ನು ಬಿದ್ದಿದ್ದಾರೆ. ಪ್ರಮುಖವಾಗಿ 3ನೇ ವಾರ್ಡ್‌ನ ಸದಸ್ಯ ಮಲ್ಲಿಕಾರ್ಜುನಗೌಡ ಭೂಮನಗೌಡ್ರ, 9ನೇ ವಾರ್ಡ್‌ನ ಜ್ಯೋತಿ ಪಾಯಪ್ಪಗೌಡ್ರ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೊಟಿ ನಡೆಸಿದ್ದು, ಅಂತಿಮವಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ನಿರ್ಣಯದ ಮೇಲೆ ಎಲ್ಲ ನಿಂತಿದೆ. ಕೇವಲ 4 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಕೈಹಾಕಿಲ್ಲ. ಆದರೂ, ಬಿಜೆಪಿಯ ಕೆಲ ಸದಸ್ಯರು ಬಿಜೆಪಿಗಿಂತಲೂ ಕಾಂಗ್ರೆಸ್ ಸದಸ್ಯರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಇನ್ನುಳಿದ ಅವಧಿಯಲ್ಲಿ ಬಿಜೆಪಿಯ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ನಡೆಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಬಿಜೆಪಿಯ ಯಾವುದೇ ಸದಸ್ಯರು ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ.-ಉಮೇಶ ಸಂಗನಾಳಮಠ, ಬಿಜೆಪಿ ನಗರ ಘಟಕ ಅಧ್ಯಕ್ಷ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ಅಧಿಕಾರ ನೀಡಿದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿದ್ದೇನೆ. ಮುಂದೆ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.-ಮಲ್ಲಿಕಾರ್ಜುನ ಭೂಮನ ಗೌಡ್ರ 3ನೇ ವಾರ್ಡ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net