

ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ನಿಮಿತ್ತ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತರ ಹಷೋದ್ಗಾರಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಶನಿವಾರ ಜರುಗಿತು.
ಭಕ್ತರು ತಮ್ಮ ಧರ್ಮ ಗುರುಗಳಿಗೆ ಭಕ್ತಿ ಶ್ರದ್ದೆಯಿಂದ ಸಲ್ಲಿಸುವ ಗೌರವ ಪಲ್ಲಕ್ಕಿ ಉತ್ಸವವಾಗಿದೆ. ಈ ಹಿನ್ನೆಲೆಯಲ್ಲಿ ರಂಭಾಪುರಿ ಪೀಠದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಮುಖ್ಯವಾಗಿ ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನ ಕೊನೆಯ ದಿನ ವಿಜಯದಶಮಿಯಂದು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗುತ್ತದೆ.
ಅಬ್ಬಿಗೇರಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ದಸರಾ ಧರ್ಮ ಸಮ್ಮೇಳನದ ವೈಭವ ವೀಕ್ಷಿಸಿದ್ದ ಭಕ್ತರು ವಿಜಯದಶಮಿಯ ದಿನ ಶನಿವಾರ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಹತ್ತಿರದ ಶ್ರೀ ವೀರಭದ್ರೇಶ್ವರ ದೇವರ ದೇವಸ್ಥಾನದಿಂದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಭಕ್ತರ ಜಯಘೊಷಗಳು ಮುಗಿಲು ಮುಟ್ಟಿತ್ತು. ಜಗದ್ಗುರುಗಳು ಬಂಗಾರದ ಕಿರೀಟ ಧರಿಸಿ ಅಡ್ಡಪಲ್ಲಕ್ಕಿ ಏರುವ ದೃಶ್ಯ ವೀಕ್ಷಿಸಲು ಭಕ್ತರು ಹಾತೊರೆಯುತ್ತಿದ್ದರು. ಅಡ್ಡಪಲ್ಲಕ್ಕಿಯಲ್ಲಿ ಹಸನ್ಮುಖರಾಗಿ ವಿರಾಜಮಾನರಾಗಿದ್ದ ಜಗದ್ಗುರುಗಳು ಭಕ್ತರನ್ನು ಆಶೀರ್ವದಿಸುತ್ತಿದ್ದ ದೃಶ್ಯ ನಯನಮನೋಹರವಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗಿತು. ಎಲ್ಲ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿ ಭಕ್ತಿ ಮೆರೆದರು.
ಮೆಳೈಸಿದ ಕಲಾ ತಂಡಗಳು: ವಿವಿಧ ಕಲಾ ತಂಡಗಳು, ವಾದ್ಯ ಮೇಳ, ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದವು. ಸಹಸ್ರಾರು ಭಕ್ತರಿಂದ ಮೊಳಗಿದ ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಒಂದೇ ರೇಣುಕಂ’ ಎಂಬ ಉದ್ವೇಷಗಳು ಮುಗಿಲು ಮುಟ್ಟಿದ್ದವು.