

ನರೇಗಲ್ಲ: ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಒಂಬತ್ತು ದಿನಗಳಿಂದ ರಂಭಾಪುರಿ ಪೀಠದ ಆಶ್ರಯದಲ್ಲಿ ಜರುಗಿದ ಧರ್ಮ ಸಮ್ಮೇಳನ ಅಭೂತಪೂರ್ವ ಯಶಸ್ವಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಹರ್ಷ ವ್ಯಕಪಡಿಸಿದರು.
ಸಮೀಪದ ಅಬ್ಬಿಗೇರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಜಗದ್ಗುರುಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ರಂಭಾಪುರಿ ಪೀಠದ ದಸರಾ ದರ್ಬಾರ್ ಧರ್ಮ ಸಮ್ಮೇಳನ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿವೆ. ಧರ್ಮ ಸಮ್ಮೇಳನ ಎಲ್ಲ ಜಾತಿ, ಜನಾಂಗದ ಭಾವನೆಗೆ ಸ್ಪಂದಿಸಿ ಸಂತೋಷವನ್ನುಂಟುಮಾಡುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇದೇ ಪ್ರಥಮ ಬಾರಿ ದಸರಾ ದರ್ಬಾರ್ ಹಮ್ಮಿಕೊಂಡಿದ್ದು, ಅದು ಹೇಗೆ ನಡೆಯಲಿದೆ ಎಂಬ ಆತಂಕ ಭಕ್ತರಲ್ಲಿತ್ತು. ಆದರೆ, ಅಬ್ಬಿಗೇರಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ಎಲ್ಲ ಆತಂಕಗಳಿಗೆ ಪೂರ್ಣ ವಿರಾಮ ನೀಡಿದ್ದಾರೆ. ಅಬ್ಬಿಗೇರಿಯ ದಸರಾ ದರ್ಬಾರ್ ಎಲ್ಲ ದರ್ಬಾರ್ಗಳಿಗಿಂತ ವಿಶೇಷವಾಗಿದೆ. ಧರ್ಮ, ಕಲೆ, ಸಾಹಿತ್ಯ, ಸಂಗೀತ ಸೇರಿ ವಿವಿಧ ಕ್ಷೇತ್ರಗಳ ಪರಿಚಯ ಮಾಡುವ ಕಾರ್ಯ ಅತ್ಯಂತ ಯಶಸ್ವಿಯಾಗಿದೆ. ಧರ್ಮ, ಸಂಸ್ಕೃತಿ ಮತ್ತು ಸಾತ್ವಿಕ ಸಮಾಜ ನಿರ್ವಣದ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಯಶಸ್ವಿಯಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಸಿದ್ದರಬೆಟ್ಟ- ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ಅಂದಪ್ಪ ವೀರಾಪೂರ, ಭರಮಪ್ಪ ಹನಮನಾಳ, ಬಾಬುಗೌಡ ಪಾಟೀಲ, ಸುರೇಶ ನಾಯ್ಕರ, ವಿಜಯಕುಮಾರ ಹಿರೇಮಠ, ಮಂಜುನಾಥ ಹಿರೇಮಠ, ಬಿ.ವಿ. ನೀರಲೋಟಿ, ಎಚ್.ಟಿ. ದ್ವಾಸಲ, ಇತರರಿದ್ದರು.