ನರೇಗಲ್ಲ ಪಪಂ ಅಧಿಕಾರ ಕಮಲಕ್ಕೋ ಕೈ ಗೋ

31-NAREGAL
Published on

ನರೇಗಲ್ಲ: ಇಲ್ಲಿನ ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸೆ. 2ರಂದು ನಿಗದಿಯಾಗಿದೆ. ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿಯ 6 ಸದಸ್ಯರು ವಾರದಿಂದ ನಾಪತ್ತೆಯಾಗಿದ್ದು, ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಮೂವರು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಶತಾಯಗತಾಯ ಅಧಿಕಾರ ಹಿಡಿಯಲು ಹವಣಿಸುತ್ತಿದೆ.

ಒಟ್ಟು 17 ಸದಸ್ಯ ಬಲವಿರುವ ಪಪಂನಲ್ಲಿ 12 ಬಿಜೆಪಿ, 3 ಕಾಂಗ್ರೆಸ್, ಇಬ್ಬರು ಪಕ್ಷೇತರ ಸದಸ್ಯರಿದ್ದು, ಪಕ್ಷೇತರಲ್ಲಿ ಒಬ್ಬರು ಬಿಜೆಪಿ ಮತ್ತೊಬ್ಬರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದು, ಬಿಜೆಪಿ 13 ಹಾಗೂ ಕಾಂಗ್ರೆಸ್ 4 ಸದಸ್ಯ ಬಲ ಹೊಂದಿದೆ.

ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದೆ. ಈ ಹಿಂದೆ ಬಿಜೆಪಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಕಮಿಟಿ ಅಧ್ಯಕ್ಷರಾಗಿದ್ದ ಸದಸ್ಯರೇ ಹೈಜಾಕ್ ಆಗಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಜೆಪಿ ಒಳಜಗಳ ಕಾಂಗ್ರೆಸ್​ಗೆ ಲಾಭ: ಬಿಜೆಪಿ ಸದದಸ್ಯರಲ್ಲಿನ ಗುಂಪುಗಾರಿಕೆ ಹಾಗೂ ಮುಖಂಡರೊಬ್ಬರ ವೈಯಕ್ತಿಕ ದ್ವೇಷದ ಹಿನ್ನೆಲೆ ಮತ್ತು ಅವರ ಕುಮ್ಮಕ್ಕಿನಿಂದ 6 ಸದಸ್ಯರು ಭಿನ್ನರಾಗ ತೆಗೆದು ನಾಪತ್ತೆ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಇದರ ಲಾಭ ಕೇವಲ 4 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್​ಗೆ ಆಗಲಿದೆ ಎನ್ನಲಾಗುತ್ತಿದೆ.

ಬಿಜೆಪಿ ನಡೆ ನಿಗೂಢ: ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿಯಲ್ಲಿನ ಬೇಗುದಿಗೆ 6 ಜನ ಸದಸ್ಯರು ಮುಖಂಡರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಆದರೂ ಬಿಜೆಪಿ ನಾಯಕರು ಕಾಣೆಯಾದ ಸದಸ್ಯರ ಹುಡುಕಾಟ, ವಿಪ್ ಜಾರಿ, ಸದಸ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಇದು ಹಲವು ಸಂಶಯಕ್ಕೆ ಕಾರಣವಾಗಿದೆ.

ಯಾರಾಗಲಿದ್ದಾರೆ ಅಧ್ಯಕ್ಷ, ಉಪಾಧ್ಯಕ್ಷ ?: ಕಾಂಗ್ರೆಸ್​ನ ನಾಲ್ವರು ಮತ್ತು ಬಿಜೆಪಿ 6 ಸದಸ್ಯರು ನಾಪತ್ತೆಯಾಗಿದ್ದು, 10 ಸದಸ್ಯ ಬಲದೊಂದಿಗೆ ಪಪಂನಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಕೈ ಹಿಡಿಯಲಿದೆ, ಅಧ್ಯಕ್ಷ-ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಬಿಜೆಪಿಯ 6 ಸದಸ್ಯರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ ಅಥವಾ ಕಾಂಗ್ರೆಸ್​ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಧಿಕಾರಕ್ಕೇರುವುದೇ ಕಾಂಗ್ರೆಸ್?: ಬಿಜೆಪಿ ಸದಸ್ಯರ ವೈಮನಸಿನ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಬಿಜೆಪಿಯ 6 ಸದಸ್ಯರನ್ನು ತನ್ನತ್ತ ಸೆಳೆದು ಅಧಿಕಾರ ಹಿಡಿಯಲು ಕಾತುರವಾಗಿದೆ. ಬಿಜೆಪಿ-ಕಾಂಗ್ರೆಸ್ 10 ಸದಸ್ಯರು, ಶಾಸಕ ಜಿ.ಎಸ್. ಪಾಟೀಲ ಮತ ಸೇರಿ ಕಾಂಗ್ರೆಸ್ 11 ಮತಗಳನ್ನು ಒಟ್ಟುಗೂಡಿಸಿದರೆ ಅಧಿಕಾರ ಕೈ ಹಿಡಿಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್​ನದ್ದಾಗಿದೆ.

ನರೇಗಲ್ಲ ಪಪಂನ ಬಿಜೆಪಿ 6 ಸದಸ್ಯರು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಕೆಲಸ ಮಾಡುವುದಿಲ್ಲ. ಸಮಸ್ಯೆಯನ್ನು ಪಕ್ಷದ ಮುಖಂಡರ ಮುಂದೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತ್ತಿತ್ತು. ಮುನಿಸಿಕೊಂಡಿರುವ ಸದಸ್ಯರನ್ನು ಸಂರ್ಪಸಿ ಪಪಂನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ.| ಮುತ್ತಣ್ಣ ಕಡಗದ ರೋಣ ಮಂಡಲ ಬಿಜೆಪಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net