ಇಷ್ಟಲಿಂಗಾರ್ಚನೆಯಿಂದ ಆತ್ಮೋದ್ಧಾರ ಶಾಂತಿ ಪ್ರಾಪ್ತಿ

12-ISHTALING PUJE
Published on

ನರೇಗಲ್ಲ: ಪರಶಿವನ ಸಂಕೇತವಾದ ಇಷ್ಟಲಿಂಗಾರ್ಚನೆಯಿಂದ ಮನುಷ್ಯನ ಆತ್ಮೋದ್ಧಾರ, ಜೀವನದಲ್ಲಿ ಶಾಂತಿ, ಸಮಾಧಾನ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಶರನ್ನವರಾತ್ರಿ ಅಂಗವಾಗಿ ಅಬ್ಬಿಗೇರಿ ಹೊಸ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರು ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡಿರುವ ಶನಿವಾರ ಹತ್ತನೇ ದಿನದ ಇಷ್ಟಲಿಂಗ ಮಹಾಪೂಜಾ ನಂತರ ನಡೆದ ಧರ್ಮ ಸಂದೇಶ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಿವನಿಲ್ಲದ ಸ್ಥಾನವೇ ಇಲ್ಲ. ಎಲ್ಲೆಡೆ ಶಿವನಿದ್ದಾನೆ. ಇಷ್ಟಲಿಂಗ ಪೂಜೆಯಲ್ಲಿ ಸಮರಸ ಭಾವ ಕಂಡರೆ, ಸ್ಥಾವರ ಪೂಜೆ ಉಪಚಾರ ಪೂಜೆಯಾಗಿರುತ್ತದೆ. ಸಾಮಾನ್ಯ ಜನರಲ್ಲಿ ಶಿವಭಕ್ತಿ ಗುರುಭಕ್ತಿ ಮೂಡಲು ಸ್ಥಾವರ ದೇವಾಲಯಗಳು ಕಾರಣವಾಗುತ್ತವೆ. ಕೆಲವರು ಸ್ಥಾವರ ಪೂಜಾದಿಗಳನ್ನು ವಿರೋಧಿಸುವುದುಂಟು. ಆದರೆ, ಅವರ ಈ ಭಾವನೆ ಸರಿಯಲ್ಲ. ಇಷ್ಟಲಿಂಗ ಪೂಜೆಯಲ್ಲಿ ಮನುಷ್ಯ ಸಮರಸನಾಗಿ ಪೂಜೆ ಮಾಡುತ್ತಾನೆ. ದೇವಾಲಯಗಳಲ್ಲಿ ಕೇವಲ ಉಪಚಾರ ಪೂಜೆ ಮಾಡಿದರೆ ತಪ್ಪೇನೂ ಆಗದು. ಇವತ್ತಿಗೂ ಕೂಡ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ಹಿಂದುಗಳಾದ ನಾವುಗಳು ಯುಗಾದಿ ಹಬ್ಬದ ದಿನವನ್ನು ಹೊಸ ವರ್ಷವೆಂದು ಭಾವಿಸುತ್ತೇವೆ. ಆ ದಿನ ಅತ್ಯಂತ ಒಳ್ಳೆಯ ದಿನವಾಗಿದ್ದು, ಆ ದಿನ ಮಾಡುವ ಕಾರ್ಯಗಳೆಲ್ಲವೂ ಕೈಗೂಡುತ್ತವೆ. ವಿಜಯ ದಶಮಿ ದಿನ ಮಾಡುವ ಪೂಜೆ ಪೂರ್ಣ ಫಲ ನೀಡುತ್ತದೆ. ಮಹಾಪೂಜೆಗೂ ಮುಂಚೆ ಜಗದ್ಗುರುಗಳು ಕುಂಭವನ್ನು ಹೊತ್ತು ಅಗ್ರೋದಕ ತಂದಿದ್ದು ವಿಶೇಷವಾಗಿತ್ತು.

ಹತ್ತು ದಿನಗಳು ಅಬ್ಬಿಗೇರಿ ಮತ್ತು ಸುತ್ತಲಿನ ಗ್ರಾಮಗಳ ಜನರೆಲ್ಲರೂ ಸರಿಯಾಗಿ ಊಟ, ನಿದ್ರೆ ಮಾಡದೆ ಭಕ್ತಿಯಿಂದ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದು ನಮಗೆ ತುಂಬಾ ಆನಂದವನ್ನುಂಟು ಮಾಡಿದೆ. ಆದ್ದರಿಂದ ಈ ಭಾಗವೆಲ್ಲವೂ ಸದಾಕಾಲ ಹಸಿರು ಮತ್ತು ಸಮೃದ್ಧಿಯಿಂದ ತುಂಬಿ, ಜನ ಜೀವನ ಎಂದಿಗೂ ಸುಖಮಯವಾಗಿರಲಿ ಎಂದು ಜಗನ್ನಿಯಾಮಕನಾದ ಆ ಪರಶಿವನನ್ನು ತಾವು ಪ್ರಾರ್ಥಿಸುವುದಾಗಿ ಜಗದ್ಗರುಗಳು ತಿಳಿಸಿದರು. ಹತ್ತು ದಿನಗಳೂ ನೀವು ನೋಡಿ ಸಂತಸಪಟ್ಟಿರುವ ಇಷ್ಟಲಿಂಗ ಮಹಾಪೂಜೆಯನ್ನು ನಿಮ್ಮ ಮನೆಗಳಲ್ಲಿ ನೀವುಗಳೂ ಕೈಗೊಳ್ಳುವ ಮೂಲಕ ಸುಖ, ಶಾಂತಿ, ನೆಮ್ಮದಿಯನ್ನು ಕಾಣಿರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net