ನರೇಗಲ್ಲ ಜನರಿಗೆ ಸಂತೆಯದ್ದೇ ಚಿಂತೆ

15Naregal1A
Published on

ನರೇಗಲ್ಲ: ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರ ಎಂದೇ ಹೆಸರಾದ ನರೇಗಲ್ಲ ಪಟ್ಟಣದ ಜನರಿಗೆ ವಾರದ ಸಂತೆಯದ್ದೇ ದೊಡ್ಡ ಚಿಂತೆಯಾಗಿದೆ. ಸುಸಜ್ಜಿತ ತರಕಾರಿ ಮಾರುಕಟ್ಟೆ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಹಲವು ದಶಕಗಳಿಂದ ಪಟ್ಟಣದ ಗಣೇಶ ದೇವಸ್ಥಾನ, ಪಾಯಪ್ಪಗೌಡ್ರ ಓಣಿ, ಮಾವಿನಕಾಯಿಯವರ ಓಣಿ, ದೊಡ್ಡ ಮಸೀದಿ, ವ್ಯವಸಾಯ ಸೇವಾ ಸಹಕಾರಿ ಸಂಘ, ಅಗಸಿ ಬಾಗಿಲು, ಹಾಲು ಉತ್ಪಾದಕರ ಸಂಘಗಳಿಗೆ ಹೋಗುವ ರಸ್ತೆಗಳ ಇಕ್ಕೆಲಗಳಲ್ಲಿ ಸೋಮವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಸುತ್ತಲಿನ ಹತ್ತಾರು ಹಳ್ಳಿಗಳ ಜನರು ವ್ಯಾಪಾರ, ವಾಹಿವಾಟಿಗಾಗಿ ಬರುತ್ತಾರೆ. ಆದರೆ, ಇಕ್ಕಟ್ಟಾದ ಜಾಗದಲ್ಲಿ ಸಂತೆ ನಡೆಯುವುದರಿಂದ ಉಸಿರುಗಟ್ಟಿಸುವ ವಾತಾವರಣ ನಿರ್ವಣವಾಗುತ್ತದೆ. ಜನಸಂದಣಿಯ ಲಾಭ ಪಡೆಯುವ ಕಳ್ಳರು ಕ್ಷಣಾರ್ಧದಲ್ಲಿ ಕೈಚಳಕ ತೋರುತ್ತಾರೆ. ಅದೆಷ್ಟೋ ಜನರು ಮೊಬೈಲ್​ಗಳನ್ನು ಕಳೆದುಕೊಂಡು ಕಂಗಲಾಗಿದ್ದಾರೆ.

ಸಂತೆ ಜಾಗದ ಸಮಸ್ಯೆ ಪರಿಹರಿಸಬೇಕು ಎನ್ನುವ ಉದ್ದೇಶದಿಂದ ಪಟ್ಟಣ ಪಂಚಾಯಿತಿಯು ಸಂತೆಯನ್ನು ಅಬ್ಬಿಗೇರಿ ರಸ್ತೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಆದರೆ, ಇದಕ್ಕೆ ಕೆಲವು ವಾರ್ಡ್​ಗಳ ಜನ ವಿರೋಧ ವ್ಯಕ್ತಪಡಿಸಿದರು. ‘ಅಬ್ಬಿಗೇರಿ ರಸ್ತೆಗೆ ಸಂತೆ ಸ್ಥಳಾಂತರವಾದರೆ ದರ್ಗಾ ಓಣಿ, ಭಾಗ್ಯನಗರ, ದ್ಯಾಂಪೂರ ಗ್ರಾಮಸ್ಥರಿಗೆ ದೂರವಾಗುತ್ತದೆ. ಆದ್ದರಿಂದ, ಈಗಿರುವ ಸ್ಥಳದಲ್ಲೇ ಸಂತೆ ಮುಂದುವರಿಯಬೇಕು’ ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಂತೆ ಸ್ಥಳಾಂತರ ಕಾರ್ಯ ನನೆಗುದಿಗೆ ಬಿದ್ದಿದೆ.

ಅವ್ಯವಸ್ಥೆಯ ಆಗರ

ಪಟ್ಟಣದ ಹೃದಯ ಭಾಗದಲ್ಲಿ ನಡೆಯುವ ಸಂತೆಗೆ ಶತಮಾನದ ಇತಿಹಾಸವಿದೆ. ಆದರೆ, ಸಂತೆಯಲ್ಲಿ ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು, ಬೇಕಾಬಿಟ್ಟಿ ಓಡಾಡುವ ಜಾನುವಾರುಗಳು, ಸಂಚಾರ ತಾಪತ್ರಯ ಹೀಗೆ ಅನೇಕ ಸಮಸ್ಯೆಗಳ ನಡುವೆ ಸಂತೆ ನಡೆಯುತ್ತಿದೆ. ಸಂತೆ ಸ್ಥಳದಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಮಳೆ ಬಂದರಂತೂ ಸಂತೆ ದನದ ದೊಡ್ಡಿಯಂತಾಗುತ್ತದೆ. ಹಂದಿಗಳು, ಬಿಡಾಡಿ ದನಗಳು ಆಗಾಗ ಕಾಳು-ಕಡಿ, ತರಕಾರಿ ತಿನ್ನುತ್ತಿರುತ್ತವೆ. ಇದೆಲ್ಲವನ್ನು ಕಂಡ ಖರೀದಿದಾರರಿಗೆ ಇರಿಸುಮುರಿಸಾಗುತ್ತದೆ.

ಸಂತೆಯು ಅತ್ಯಂತ ಇಕ್ಕಟ್ಟಾದ ಸ್ಥಳದಲ್ಲಿ ನಡೆಯುತ್ತಿದ್ದು, ಸ್ಥಳಾಂತರ ಅವಶ್ಯಕವಾಗಿದೆ. ಈ ಹಿಂದೆ ಸಣ್ಣ ಪ್ರಮಾಣದಲ್ಲಿದ್ದ ಸಂತೆಗೆ ಇಂದು ನೂರಕ್ಕೂ ಅಧಿಕ ವ್ಯಾಪಾರಸ್ಥರು ಬರುತ್ತಿದ್ದಾರೆ. ಸಂತೆಯು ಅವ್ಯವಸ್ಥೆಯಿಂದ ಕೂಡಿದ್ದು, ಪಟ್ಟಣದ ಹೊರವಲಯದಲ್ಲಿ ಸುಸಜ್ಜಿತವಾದ ಮಳಿಗೆ ನಿರ್ವಿುಸುವ ಮೂಲಕ ನಿರ್ಭೀತಿಯಿಂದ ವ್ಯಾಪಾರ ನಡೆಸಲು ಪ.ಪಂ ಆಡಳಿತ ಮಂಡಳಿ ಮುಂದಾಗಬೇಕು. | ಎಂ.ಎಸ್. ಧಡೇಸೂರಮಠ, ನರೇಗಲ್ಲ ನಿವಾಸಿ ಸೋಮವಾರ ಸಂತೆಯನ್ನು ಬೇರೆಡೆ ಸ್ಥಳಾಂತರಿಸಲು ಈಗಾಗಲೇ ಪಟ್ಟಣ ಪಂಚಾಯಿತಿ 50 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂತೆ ಸ್ಥಳಾಂತರವನ್ನು ತಡೆ ಹಿಡಿಯಲಾಗಿದೆ. ಮುಂಬರುವ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು. | ಮಹೇಶ ನಿಡಶೇಶಿ, ಪ.ಪಂ ಮುಖ್ಯಾಧಿಕಾರಿ ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net