

ನರೇಗಲ್ಲ: ಭವಿಷ್ಯಕ್ಕಾಗಿ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಸೂಕ್ತ ಬೇಸಾಯ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಅದರಲ್ಲೂ ಸಾವಯವ ಕೃಷಿ, ಸಾವಯವ ಗೊಬ್ಬರ ಬಳಸಲು ಮುಂದಾಗಬೇಕು ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಹೇಳಿದರು.
ಕೃಷಿ ಇಲಾಖೆಯ ಆತ್ಮಾ ಯೋಜನೆಯಡಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ವತಿಯಿಂದ ಸಮೀಪದ ಕೋಟುಮಚಗಿ ಗ್ರಾಮದ ಸಾವಯವ ಕೃಷಿಕ ವೀರೇಶ ನೇಗಲಿ ಅವರ ಸಾವಯವ ಕೃಷಿ ಘಟಕದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಸಿ ಆಕಳಿನ ಗೊಬ್ಬರ, ಗಂಜಲು ಸಂರಕ್ಷಿಸಿ ಅದನ್ನು ಉತ್ತಮ ಗುಣಮಟ್ಟದ ಗೊಬ್ಬರವನ್ನಾಗಿ ಪರಿವರ್ತಿಸಿ, ಹದಗೊಳಿಸಿ ನೇರವಾಗಿ ಮಣ್ಣೊಳಗೆ ಸೇರಿಸಬೇಕು. ಭೂಮಿಯ ಮೇಲೆ ಮಣ್ಣು ಕೂಡ ಜೀವಂತವಿದೆ. ಮಣ್ಣಿನ ಮೇಲಿರುವ ಜೀವಗಳಿಗಿಂತ ಅದರೊಳಗೆ ಅತಿಹೆಚ್ಚು ಜೀವಿಗಳಿವೆ. ಬೆಳೆಯ ಉತ್ಪಾದಕತೆ ಹೆಚ್ಚಿಸಲು ಮಣ್ಣಿನಲ್ಲಿರುವ ಜೀವಿಗಳು ಬದುಕಿ ತಮ್ಮ ನಿತ್ಯದ ಚಟುವಟಿಕೆಗಳನ್ನು ನಡೆಸಬೇಕು. ಅದಕ್ಕಾಗಿ ರಾಸಾಯನಿಕ ವಸ್ತುಗಳನ್ನು ಬಳಸಬಾರದು ಎಂದರು. ಆತ್ಮಾ ಯೋಜನೆ ಕುಂದಗೋಳ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಶ್ರೀದೇವಿ ಬಾಬು ಆಲೂರ ಮಾತನಾಡಿ, ಮುಂದಿನ ಪೀಳಿಗೆಗೆ ಸುರಕ್ಷಿತವಾದ ಮಣ್ಣು ಕೊಡಬೇಕಿದೆ. ಮಣ್ಣಿನ ಫಲವತ್ತತೆ ಹಾಳಾದರೆ ಇಡೀ ಆಹಾರ ಜಾಲ ತೊಂದರೆಗೆ ಸಿಲುಕುತ್ತದೆ ಎಂದರು. ಶಿವಪ್ಪ ನೇಗಲಿ, ಈರಪ್ಪ ಗೋದಿ, ಚನ್ನಬಸಪ್ಪ ಗೋದಿ, ಮಲ್ಲಪ್ಪ ಕಿತ್ತೂರ, ಶೇಖಪ್ಪ ನೀರಲಗಿ, ನಿಂಗಪ್ಪ ಕಿರಟಗೇರಿ ಇದ್ದರು.