ನರೇಗಾದಲ್ಲಿ ಹಸಿರೀಕರಣಕ್ಕೆ ಒಲವು, ಕೈತೋಟ ನಿರ್ಮಾಣಕ್ಕೆ ಜಿಪಂ ಸಜ್ಜು ಜುಲೈನಲ್ಲಿ ಕಾಮಗಾರಿ ಆರಂಭ

download
Published on
ಶಿವರಾಜ ಎಂ. ಬೆಂಗಳೂರು
ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಪ್ರಗತಿಯತ್ತ ಮುನ್ನುಗ್ಗುತ್ತಿರುವ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಂದಿನ ಜುಲೈನಲ್ಲಿ ಇದೇ ನರೇಗಾ ಯೋಜನೆಯಲ್ಲಿ ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಟ್ಟು ಹಸಿರೀಕರಣಕ್ಕೆ ಸಜ್ಜಾಗಿದೆ.
ಕರೊನಾ ವೈರಸ್ ಹಾವಳಿ ನಡುವೆಯೇ ಗ್ರಾಮೀಣ ಭಾಗದ ಕೂಲಿಕಾರ್ಮಿಕರ ತುತ್ತಿನಚೀಲ ತುಂಬಿಸಲು ಮುಂದಡಿಯಿಟ್ಟ ನರೇಗಾ ಯೋಜನೆ (ಕುಂಟೆ, ಕಲ್ಯಾಣಿ, ಗೋಕಟ್ಟೆ, ಕೃಷಿಹೊಂಡ) ಕಾಮಗಾರಿಗಳು ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿವೆ. ಜುಲೈನಲ್ಲಿ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಡಲು ಜಿಪಂ ರೂಪುರೇಷೆ ಸಿದ್ಧಪಡಿಸಿದೆ. ಇದರಲ್ಲಿ ಮುಖ್ಯವಾಗಿ ಕೈತೋಟ ನಿರ್ಮಾಣಕ್ಕೆ ಒಲವು ತೋರಿದ್ದು, ಜಿಲ್ಲೆಯ ತೋಟಗಾರಿಕೆ ಇಲಾಖೆ ಪೂರ್ವ ಸಿದ್ಧತೆಯಲ್ಲಿದೆ.
ಕೈತೋಟ ನಿರ್ಮಾಣ:   ಗ್ರಾಮೀಣ ಪ್ರದೇಶದಲ್ಲಿ ರೈತರು ಮನೆಗಳ ಹಿತ್ತಲು ಅಥವಾ ಮನೆ ಸುತ್ತಳತೆಯಲ್ಲಿ ಕೈತೋಟ ನಿರ್ಮಾಣಕ್ಕೆ ಮುಂದಾದರೆ ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ವಿತರಿಸಲಾಗುತ್ತದೆ. ಸಸಿ ನೆಡಲು ಗುಂಡಿ ತೋಡುವುದು ಮತ್ತಿತರ ಕಾಮಗಾರಿಗೆ ನರೇಗಾ ಯೋಜನೆಯಲ್ಲಿ ಕೂಲಿಯೂ ದೊರಕಲಿದೆ. ಲಾಕ್‌ಡೌನ್ ಸಂದರ್ಭದಲ್ಲಿ ರೈತಾಪಿ ವರ್ಗಕ್ಕೆ ಕೂಲಿ ಜತೆಗೆ ಮನೆ ಸುತ್ತಮುತ್ತ ಹಸಿರೀಕರಣ ನಿರ್ಮಾಣಕ್ಕೂ ಅವಕಾಶವಾಗಲಿದೆ ಎಂಬುದು ಈ ಯೋಜನೆ  ಉದ್ದೇಶವಾಗಿದೆ.
ಪ್ರತಿ ತಾಲೂಕಿಗೆ 5 ಸಾವಿರ ಅರ್ಜಿ: ಜಿಲ್ಲೆಯ ನಾಲ್ಕೂ ತಾಲೂಕುಗಳ ಇಒಗಳಿಗೆ ಈ ಯೋಜನೆ ಗುರಿ ಮುಟ್ಟಲು ಟಾರ್ಗೆಟ್ ನೀಡಲಾಗಿದೆ. ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಈ ಯೋಜನೆ ಲಪ್ರದವಾಗಬೇಕು ಎಂಬ ಸೂಚನೆ ರವಾನಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಸುಮಾರು ಎರಡೂವರೆ ಸಾವಿರ ರೈತರನ್ನು ಈ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ.
ವಿವಿಧ ಜಾತಿ ಸಸಿಗಳ ಪೂರೈಕೆ: ಕರಿಬೇವು, ನುಗ್ಗೆ, ನಿಂಬೆ, ಸೀಬೆ, ಪಪ್ಪಾಯ ಸೇರಿ ಆರೇಳು ಬಗೆ ಸಸಿ ವಿತರಣೆಗೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಈಗಾಗಲೇ ಜಿಲ್ಲೆಯಲ್ಲಿನ 8 ಾರಂಗಳಲ್ಲಿ ಸಸಿಗಳಿದ್ದು, ಅಗತ್ಯಬಿದ್ದರೆ ಮತ್ತಷ್ಟು ಸಸಿ ಬೆಳೆಸಿ ರೈತರಿಗೆ ವಿತರಿಸಲು ಸಿದ್ಧವಾಗಿದೆ. ಆಯಾ ತಾಲೂಕುಗಳ ರೈತರಿಗೆ ಆಯಾ ತಾಲೂಕುಗಳ ಾರಂಗಳಿಂದಲೇ ಸಸಿಗಳು ದೊರಕಲಿವೆ.
ಜಾಗ ಪರಿಶೀಲನೆ: ಈ ಯೋಜನೆಗೆ ಒಳಪಡುವವರ ಮನೆಗಳ ಬಳಿ ಜಾಗ ಇರುವ ಬಗ್ಗೆ ಅಧಿಕಾರಿಗಳು ಸರ್ವೇ ನಡೆಸಿ ವರದಿ ನೀಡಲಿದ್ದಾರೆ. ಎಷ್ಟು ಲಾನುಭವಿಗಳಿದ್ದಾರೆ, ಎಷ್ಟು ಸಸಿಗಳ ಬೇಡಿಕೆಯಿದೆ ಎಂಬ ಮಾಹಿತಿ ಆಧರಿಸಿ ಯೋಜನೆ ಸಾಕಾರಕ್ಕೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಕರೊನಾ ಲಾಕ್‌ಡೌನ್ ಸಂಕಷ್ಟದ ಸಮಯದಲ್ಲಿ ನರೇಗಾ ಯೋಜನೆ ರೈತಾಪಿ ವರ್ಗಕ್ಕೆ ಆಸರೆಯಾಗಿದೆ. ಈ ಯೋಜನೆಯಡಿ ಮತ್ತಷ್ಟು ಉತ್ತಮ ಕಾರ್ಯ ರೂಪಿಸುವತ್ತ ಜಿಪಂ ಕಾರ್ಯೋನ್ಮುಖವಾಗಿದೆ.

ನರೇಗಾ ಯೋಜನೆಯಲ್ಲಿ ಅವಕಾಶವಿರುವಷ್ಟು ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಮಳೆಗಾಲಕ್ಕೆ ಮುನ್ನ ಕುಂಟೆ, ಕಲ್ಯಾಣಿ, ಗೋಕಟ್ಟೆ ಮತ್ತಿತರ ನೀರು ಸಂಗ್ರಹಣಾ ಸ್ಥಳಗಳನ್ನು ಅಭಿವೃದ್ಧಿಪಡಿಸಲು, ಮಳೆಗಾಲದಲ್ಲಿ ಸಸಿ ನೆಡಲು ನರೇಗಾ ಅಡಿ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಎನ್.ಎಂ.ನಾಗರಾಜ್ ಸಿಇಒ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೂಲಿ ದೊರಕಿಸಿಕೊಡುವುದು ಹಾಗೂ ಕುಟುಂಬಗಳಿಗೆ ಅವಶ್ಯಕವಿರುವ ಪೌಷ್ಟಿಕಾಂಶ ಆಹಾರ ಉತ್ಪಾದನೆಗೆ ಅವಕಾಶ ಮಾಡಿಕೊಡುವುದು ಈ ಯೋಜನೆಯ ಪ್ರಮುಖ ಉದ್ಧೇಶವಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆ ಎಲ್ಲ ರೀತಿಯಲ್ಲೂ ಕಾರ್ಯೋನ್ಮುಖವಾಗಿದೆ. ಮಹಾಂತೇಶ್ ಮರಗೋಡ ಉಪನಿರ್ದೇಶಕ ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುಂಟೆ, ಕಲ್ಯಾಣಿ, ಬದುಗಳ ನಿರ್ಮಾಣಗಳ ಕಾಮಗಾರಿಗಳನ್ನು ಜೂನ್  ಅಂತ್ಯದೊಳಗೆ ಪೂರ್ಣಗೊಳಿಸಿ ಜುಲೈನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಸಸಿಗಳನ್ನು ನೆಡಲು ಯೋಜನೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ.    ಕೆ.ಕರಿಯಪ್ಪ ಉಪಕಾರ್ಯದರ್ಶಿ ಗ್ರಾಮಾಂತರ ಜಿಲ್ಲಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net