

ಗುಂಡ್ಲುಪೇಟೆ: ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ನರೇಗಾ ಕಾವಗಾರಿಯನ್ನು ರಾತ್ರೋರಾತ್ರಿ ಜೆಸಿಬಿಗಳ ಮೂಲಕ ಮಾಡಿಸಿ ಬಿಲ್ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಗ್ರಾಮದ ಸಣ್ಣಕೆರೆ ಹಾಗೂ ಬಾವಿ ಮೂಲದಿಂದ ನೀರು ಹರಿಯುವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ರಾತ್ರೋರಾತ್ರಿ ಜೆಸಿಬಿ ಬಳಸಿ ಮಾಡಲಾಗಿದೆ.
ಪಿಡಿಒ ಹಾಗೂ ಇಂಜಿನಿಯರ್ ಸಹಕಾರದಿಂದ ಈ ಬಾಬ್ತು ಲಕ್ಷಾಂತರ ರೂಪಾಯಿ ಬಿಲ್ ಮಾಡಿಕೊಳ್ಳಲಾಗಿದೆ. ಇದರಿಂದ ಜಾಬ್ ಕಾರ್ಡ್ ಹೊಂದಿರುವ ನೂರಾರು ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕಾರ್ಮಿಕರಿಗೆ ಕೆಲಸ ಕೊಡಲು ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನಾದರೂ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಅಕ್ರಮಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾಮಪಂವಾಯಿತಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡ ಸಿದ್ದರಾಜು ಎಚ್ಚರಿಕೆ ನೀಡಿದ್ದಾರೆ.