ನರೇಗಾ ಕಾಮಗಾರಿ ನಿಲ್ಲಿಸಲು ರೈತರ ಮನವಿ

Hadagali Letter
ಹೊಳಗುಂದಿ-ಬಾವಿಹಳ್ಳಿ ಗ್ರಾಮದ ರೈತರು ಅಧಿಕಾರಿಗೆ ಬರೆದ ಪತ್ರ.
Published on

ಹೂವಿನಹಡಗಲಿ: ತಾಲೂಕಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಕಾರ್ಮಿಕರ ಕೊರತೆ ಕಾಡುತ್ತಿದ್ದು, ನರೇಗಾ ಕಾಮಗಾರಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಬೇಕು ಎಂದು ಹೊಳಗುಂದಿ ಹಾಗೂ ಬಾವಿಹಳ್ಳಿ ಗ್ರಾಮಗಳ ರೈತರು ಗುರುವಾರ ಪಿಡಿಒ ಪರಮೇಶ್ವರಪ್ಪಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈಗಾಗಲೇ ಗ್ರಾಮದಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಕೃಷಿ ಕೂಲಿ ಕಾರ್ಮಿಕರು ನರೇಗಾ ಕೆಲಸಗಳಿಗೆ ಹೋಗುತ್ತಿರುವುದರಿಂದ ಸಮಸ್ಯೆಯಾಗಿದೆ. ಮೆಕ್ಕೆಜೋಳ, ಜೋಳ ಬೆಳೆಗಳಲ್ಲಿ ಪ್ರಸ್ತುತ ಎಡೆಕುಂಟೆ ಹೊಡೆಯುವುದು, ಗೊಬ್ಬರ ಹಾಕುವುದು ಮತ್ತು ಕಳೆ ತೆಗೆಯುವ ಕೆಲಸಗಳಿಗೆ ಕೂಲಿ ಆಳುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಆದರೆ ನರೇಗಾ ಕೆಲಸಗಳಿಗೆ ಹೋಗುವುದರಿಂದ ಕೃಷಿ ಕೆಲಸಗಳನ್ನು ಮಾಡಲು ಕೂಲಿ ಕಾರ್ಮಿಕರ ಅಭಾವ ಕಾಡುತ್ತಿದೆ.

ಮುಂಗಾರು ಕೃಷಿ ಚಟುವಟಿಕೆಗಳು ಪೂರ್ಣಗೊಳ್ಳುವವರೆಗೂ ನರೇಗಾ ಕೆಲಸಗಳನ್ನು ನಿಲ್ಲಿಸಬೇಕು ಎಂದು ರೈತರಾದ ಎಚ್.ಸಿದ್ದಲಿಂಗಪ್ಪ, ಮರಿಯಪ್ಪ, ಹನುಮಂತಪ್ಪ ಬಿ.ಕೊಟ್ರೇಶ, ಪುಟಾಣಿ ಬಸವರಾಜ, ಎಚ್.ರುದ್ರಗೌಡ, ಎಸ್.ಪಕ್ಕೀರಗೌಡ ಇತರರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net