ನರೇಗಾ ಕೆಲಸದ ವೇಳೆ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಪರಿಹಾರ ನೀಡಲು ಪ್ರತಿಭಟನೆ

090622 Koppal AIAWU Protest
ಕೊಪ್ಪಳದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕೊಪ್ಪಳ: ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ನರೇಗಾ ಕಾಮಗಾರಿ ವೇಳೆ ಟ್ರಾೃಕ್ಟರ್ ಹರಿದು ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆರೆ ಹೂಳೆತ್ತುವ ಕಾಮಗಾರಿ ವೇಳೆ ಟ್ರಾೃಕ್ಟರ್ ಅವಘಡ ಸಂಭವಿಸಿದೆ. ಹನುಮವ್ವ ಸಿದ್ನಳ್ಳಿ ಎಂಬ ಮಹಿಳೆ ಮೃತಪಟ್ಟರೆ, ದೇವಮ್ಮ ಆಗೋಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲಸಗಾರರಿಗೆ ಕಾಮಗಾರಿ ಸ್ಥಳದಲ್ಲಿ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಅಪಘಾತವಾದರೂ ಯಾವುದೇ ಪರಿಹಾರ ನೀಡಿಲ್ಲ. ಇದರಿಂದ ಕೂಲಿಕಾರರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಮೃತಪಟ್ಟ ಮಹಿಳೆ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಗೊಂಡವರಿಗೆ 5 ಲಕ್ಷ ರೂ. ವಿತರಿಸಬೇಕು. ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು. ನಿವೇಶನ, ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ವಿಳಂಬ ಮಾಡಬಾರದು. ಮಾಡಿದಲ್ಲಿ ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಸುಂಕಪ್ಪ ಗದಗ, ಫಕೀರಪ್ಪ ಪೂಜಾರ, ಫಕೀರವ್ವ, ಯಲ್ಲಮ್ಮ, ದುರ್ಗವ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net