

ಅರಕೇರಾ: ನರೇಗಾ ಯೋಜನೆ ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ ಮಂಗಳವಾರ ಪರಿಶೀಲಿಸಿದರು.
ತಾಲೂಕಿನ ಬಿ.ಗಣೇಕಲ್ ಗ್ರಾಪಂ ವ್ಯಾಪ್ತಿಯ ಪಂದ್ಯಾನ, ಊಟಿ ಬಸವೇಶ್ವರ ದೇವಸ್ಥಾನ ಸೇರಿ ವಿವಿಧೆಡೆ ಕೈಗೊಂಡ ಬದು ನಿರ್ಮಾಣ, ಕೃಷಿ ಹೊಂಡ, ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಕೂಲಿಕಾರರ ಕೂಲಿ ಪಾವತಿ, ಕೆಲಸದ ಅಳತೆ, ನರೇಗಾ ಯೋಜನೆಗಳ ಸೌಲಭ್ಯ ಸೇರಿ ಕಡತಗಳಲ್ಲಿನ ಮಾಹಿತಿ ಸಂಗ್ರಹಿಸಿದರು. ಪ್ರಗತಿಯಲ್ಲಿರುವ ಕೃಷಿ ಹೊಂಡ ಕಾಮಗಾರಿ ಪರಿಶೀಲಿಸಿ, ನಿಗದಿಪಡಿಸಿದ ಅಳತೆಯನ್ನು ಮಾಡಿಸಿದರು.
ನಂತರ ಬಿ.ಗಣೇಕಲ್ ಗ್ರಾಪಂ ಕಚೇರಿಗೆ ಭೇಟಿ ನೀಡಿ, ನರೇಗಾ ಯೋಜನೆಗೆ ಸಂಬಂಧಿಸಿದ ಕಾಮಗಾರಿ ಕಡತಗಳು, ಏಳು ವಹಿಗಳು ಪರಿಶೀಲಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ 3032 ಉದ್ಯೋಗ ಚೀಟಿಗಳು ಇವೆ. ಅದರಲ್ಲಿ ಪ್ರಸ್ತುತ 2520 ಚಾಲ್ತಿಯಲ್ಲಿವೆ ಹಾಗೂ 6037 ಕೂಲಿ ಕಾರ್ಮಿಕರನ್ನು ಗ್ರಾಪಂ ಹೊಂದಿದೆ ಎಂಬ ಮಾಹಿತಿ ಪಡೆದುಕೊಂಡರು. ಎಂಐಎಸ್ ವರದಿಗೆ ಸಂಬಂಧಿಸಿದಂತೆ ಭುವನ್, ಜಿಯೋ ಟ್ಯಾಗ್, ಡಿಪಿಆರ್‌ಗಳ ದಾಖಲೆಗಳನ್ನು ಪರಿಶೀಲಿಸಿದರು.