

ಗಜೇಂದ್ರಗಡ: ಗ್ರಾಮೀಣ ಜನರ ಬದುಕಿಗೆ ನರೇಗಾ ಯೋಜನೆ ವರದಾನವಾದರೇ, ಯೋಜನೆಯ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವ ಜಿಲ್ಲೆಯ ನರೇಗಾ ಸಿಬ್ಬಂದಿಗೆ ಸಕಾಲಕ್ಕೆ ವೇತನವಾಗದೆ ಶಾಪವಾಗಿದೆ.
ಸರ್ಕಾರದ ಯೋಜನೆಯ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂಬ ಆಶಯದಲ್ಲಿ ಸಾಕಷ್ಟು ಶ್ರಮಿಸುತ್ತಿರುವ ನರೇಗಾ ಸಿಬ್ಬಂದಿ ಜೀವನ ಇದೀಗ ಐದು ತಿಂಗಳಿಂದ ವೇತನವಿಲ್ಲದೇ ದುಸ್ತರ ಎನಿಸಿದೆ.
ನರೇಗಾ ಯೋಜನೆಯ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿ ಆಗದಿರುವುದು ಒಂದೆಡೆಯಾದರೆ. ಕೆಲ ತಾಲೂಕುಗಳಲ್ಲಿ ಮೇಲಾಧಿಕಾರಿಗಳ ಯೋಜನೆಯ ಜತೆಗೆ ಹೆಚ್ಚುವರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ಅವರ ಮಾನಸಿಕ ಒತ್ತಡ ಹೆಚ್ಚಳಕ್ಕೆ ಕಾರಣವಾಗಿದೆ.
ನರೇಗಾ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಎಡಿಪಿಸಿ, ಅಕೌಂಟ್ಸ್ ಮ್ಯಾನೇಜರ, ಡಿಎಂಐಎಸ್, ಡಿಇಸಿ ಇದ್ದರೆ ತಾಲೂಕು ಮಟ್ಟದಲ್ಲಿ ಟಿಸಿ, ಟಿಎಂಇಸಿ, ಟಿಐಇಸಿ ಆಡಳಿತ ಸಹಾಯಕರು ಹಾಗೂ ನರೇಗಾ ಡಿಇಒ ಇದ್ದಾರೆ. ಇನ್ನೂ ಗ್ರಾ.ಪಂ. ಮಟ್ಟದಲ್ಲಿ ತಾಂತ್ರಿಕ ಸಹಾಯಕರು, ಬಿಎಫ್ಟಿ, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ್ ಮಿತ್ರರು ಸೇರಿ ಒಟ್ಟು 200ಕ್ಕೂ ಅಧಿಕ ಸಿಬ್ಬಂದಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕಾಲಕಾಲಕ್ಕೆ ನರೇಗಾ ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾದ ಸಂಬಳವಿಲ್ಲದೇ ಕುಟುಂಬ ನಿರ್ವಹಣೆ, ಕಾಮಗಾರಿ ಸ್ಥಳಗಳಿಗೆ ಓಡಾಟಕ್ಕೆ ಪೆಟ್ರೋಲ್ಗೂ ವೇತನ ಸಾಲದಂತಾಗಿದೆ.
ವೇತನ ಪಾವತಿಗೆ ವಿಳಂಬ ಆಗುವುದು ಎಲ್ಲಿ?:
ನರೇಗಾ ಸಿಬ್ಬಂದಿ ವೇತನ ಸೇರಿ ಲೆಕ್ಕ ಹಾಗೂ ಆಡಳಿತ ವಿಷಯವಾಗಿಯೇ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಿಬ್ಬಂದಿಯೂ ಇದ್ದಾರೆ, ತಾಲೂಕುಗಳಲ್ಲಿ ಆಡಳಿತ ಸಹಾಯಕರು ನರೇಗಾ ವಿಭಾಗದ ಎಲ್ಲ ಸಿಬ್ಬಂದಿ ಹಾಜರಾತಿ ಹಾಗೂ ಪ್ರಯಾಣ ವರದಿ ಸಂಗ್ರಹಿಸಿ ಜಿಪಂಗೆ 5ನೇ ತಾರೀಕಿನೊಳಗೆ ಕಳೆಸುತ್ತಾರೆ. ಆದರೆ, ಜಿಲ್ಲಾಮಟ್ಟದಲ್ಲಿರುವ ಅಕೌಂಟ್ಸ ಮ್ಯಾನೇಜರ್ ಎಲ್ಲರ ಮಾಸಿಕ ವರದಿ ಪರಿಶೀಲಿಸಿ ವೇತನ ಪಾವತಿಗೆ ಅಕೌಂಟ್ಸ್ ವಿಭಾಗ ಸೇರಿ ವಿವಿಧ ಹಂತಗಳಲ್ಲಿ ಪರಿಶೀಲನೆ ಆಗಿ ಸಿಇಒ ಅವರಿಂದ ಆಯುಕ್ತಾಲಯಕ್ಕೆ ಹೋಗಿ ಅವರು ಅನುಮೋದನೆ ನೀಡಿದ ಬಳಿಕ ಸಂಬಳ ಆಗುತ್ತದೆ. ತಾಪಂನಿಂದ ಜಿಪಂಗೆ ಕಾಲಕಾಲಕ್ಕೆ ಮಾಸಿಕ ಹಾಜರಾತಿ ಹಾಗೂ ಪ್ರಯಾಣ ಭತ್ಯೆಗೆ ಅಗತ್ಯ ದಾಖಲೆ ಕಳಿಸಲಾಗುತ್ತಿದೆ. ಆದರೆ, ಜಿಪಂ ವ್ಯಾಪ್ತಿಯಲ್ಲಿ ವೇತನ ಪಾವತಿಗೆ ತಡವಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಿಇಒ ಅವರೇ ಗಮನಹರಿಸಬೇಕಿದೆ.
ಏಪ್ರಿಲ್ ತಿಂಗಳಿನಿಂದ ನಮಗೆ ವೇತನ ಪಾವತಿ ಆಗಿಲ್ಲ, ಸಂಬಳವಂತೂ ಮೊದಲೆ ಕಡಿಮೆ . ಅದರಲ್ಲೂ ಐದು ತಿಂಗಳಾದರು ವೇತನ ಪಾವತಿ ಆಗದಿದ್ದರೆ ಕಷ್ಟವಾಗುತ್ತದೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. | ಹೆಸರು ಹೇಳಲಿಚ್ಚಿಸದ ನರೇಗಾ ನೌಕರನರೇಗಾ ಸಿಬ್ಬಂದಿಗೆ ಈ ಮೊದಲು ತಾಲೂಕು ಪಂಚಾಯಿತಿಗಳಿಂದ ವೇತನ ಪಾವತಿಯಾಗುವ ವ್ಯವಸ್ಥೆ ಇತ್ತು. ಇದೀಗ ಸರ್ಕಾರ ಅವರಿಗೆ ನೇರ ಪಾವತಿಗೆ ಆದೇಶ ನೀಡಿದೆ. ಕೆಲ ತಾಂತ್ರಿಕ ದೋಷಗಳ ಕಾರಣದಿಂದ ವೇತನ ಪಾವತಿಗೆ ಹಿನ್ನಡೆಯಾಗಿದೆ. ನಾವೂ ಸರ್ಕಾರದ ಗಮನಕ್ಕೆ ತರುತ್ತೇವೆ. ಅತೀ ಶೀಘ್ರ ಅವರ ವೇತನ ಪಾವತಿಯಾಗಲಿದೆ.| ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ, ಪ್ರಭಾರಿ ಜಿ.ಪಂ. ಸಿಇಒ ಗದಗ