ಹೈನುಗಾರಿಕೆಗೆ ಆಸರೆಯಾಗದ ನರೇಗಾ

narega
Published on

ಎನ್​.ಮುನಿವೆಂಕಟೇಗೌಡ ಕೋಲಾರ: ನರೇಗಾ ಯೋಜನೆಯಡಿ ಜಾನುವಾರುಗಳಿಗೆ ಶೆಡ್​ ನಿಮಾರ್ಣ ಮಾಡಿಕೊಳ್ಳಲು ಆರ್ಥಿಕ ನೆರವು ದೊರೆಯುತ್ತಿದ್ದು, ಯೋಜನೆಯಲ್ಲಿನ ನಿಯಮಗಳಿಂದ ಶೆಡ್​ ನಿಮಾರ್ಣ ಮಾಡಿ ವರ್ಷಗಳೇ ಕಳೆದರೂ ಹಲವು ಲಾನುಭವಿಗಳಿಗೆ ಇದುವರೆಗೂ ಹಣ ಸಂದಾಯವಾಗದೆ ಪರಿತಪಿಸುವಂತಾಗಿದೆ.

ನರೇಗಾ ಯೋಜನೆಯಲ್ಲಿ ಜಾನುವಾರುಗಳ ಶೆಡ್​ ನಿಮಾರ್ಣವು ಉದ್ಯೋಗ ಖಾತ್ರಿ ಯೋಜನೆಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ರೈತರಿಗೆ ಶೆಡ್​ ನಿಮಾರ್ಣ ಮಾಡಲು ಆರ್ಥಿಕ ನೆರವು ದೊರೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಜನರು ಸಾಲ ಮಾಡಿ ಶೆಡ್​ ನಿಮಾರ್ಣ ಮಾಡಿಕೊಂಡಿದ್ದಾರೆ.

ಕೃಷಿಯ ಜತೆಗೆ ಸಾವಿರಾರು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುರಿ, ಮೇಕೆ, ಪಶು ಸಾಕಣೆಗೆ ಸುಸಜ್ಜಿತ ಕಟ್ಟಡ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಬಿಸಿಲು, ಮಳೆ, ಚಳಿಗೆ ಸಿಲುಕಿ ರೋಗಗಳಿಗೆ ತುತ್ತಾಗುವಂತಹ ಪರಿಸ್ಥಿತಿ ಉಂಟಾಗಿದೆ. ಜತೆಗೆ ಸೂಕ್ತ ರಕ್ಷಣೆ ಇಲ್ಲದೆ ಜಾನುವಾರುಗಳ ಕಳವು ಸಹ ಹೆಚ್ಚಾಗಿದ್ದು, ಹಲವು ಕಡೆ ಚಿರತೆ ದಾಳಿಗಳಿಂದ ಕುರಿ ಮೇಕೆಗಳು ಸತ್ತಿರುವ ಉದಾಹರಣೆಗಳಿವೆ. ನರೇಗಾ ಯೋಜನೆಯಡಿ ಗ್ರಾಪಂ ಮೂಲಕ ಜಾನುವಾರುಗಳ ಶೆಡ್​ ನಿಮಾರ್ಣ ಮಾಡಿಕೊಳ್ಳಲು ಹಣಕಾಸು ಸಹಾಯ ದೊರೆಯುತ್ತಿದೆ. 20/10 ಅಡಿಗೆ 57 ಸಾವಿರ ರೂ., ಕುರಿ ಮತ್ತು ಮೇಕೆ ಶೆಡ್​ನ 14/10 ಅಡಿಗೆ 70 ಸಾವಿರ ರೂ. ಕೂಲಿ ಮತ್ತು ಸಾಮಗ್ರಿಗಳ ವೆಚ್ಚವಾಗಿ ನರೇಗಾ ಯೋಜನೆಯಲ್ಲಿ ನೀಡಲಾಗುತ್ತಿದೆ. ಈಗಾಗಲೇ ಎನ್​ಎಂಆರ್​ ಮೂಲಕ ಕೂಲಿಯಿಂದ ಇಂತಿಷ್ಟು ಹಣ ಮತ್ತು ಸಾಮಗ್ರಿ ವೆಚ್ಚ ನೀಡಲಾಗುತ್ತಿದೆ. ಆದರೆ, ಇದಕ್ಕಾಗಿ ವರ್ಷಾನುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮುಗಿದ ಕೂಲಿ ಹಣ 2 ರಿಂದ 3 ತಿಂಗಳಿನಲ್ಲಿ ಕೂಲಿ ಹಣ ಕೈ ಸೇರಿದರೆ, ಸಾಮಗ್ರಿಗಳ ಹಣಕ್ಕೆ ಕಾಯುವಂತ ಪರಿಸ್ಥಿತಿ ಇದೆ. ಸಾಮಗ್ರಿ ಹಣವು ಸಪ್ಲೆ ಬಿಲ್​ ಮೂಲಕ ನೀಡಲಾಗುತ್ತಿರುವುದರಿಂದ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಹೆಚ್ಚಿದ ಬೇಡಿಕೆ

ಉದ್ಯೋಗ ಖಾತರಿಯ ನೆರವು ಪಡೆದು ಜಿಲ್ಲೆಯಲ್ಲಿ 2023&-24ನೇ ಸಾಲಿನಲ್ಲಿ ಒಟ್ಟು 2,868 ಶೆಡ್​ಗಳು ನಿಮಾರ್ಣವಾಗಿದ್ದವು. 2024&-25ನೇ ಸಾಲಿನಲ್ಲಿ 3,098 ಶೆಡ್​ ನಿರ್ಮಿಸಿಕೊಂಡಿದ್ದಾರೆ. ಮುಂದಿನ 2025&-26ನೇ ಸಾಲಿನ ಆರ್ಥಿಕ ವರ್ಷಕ್ಕೆ ಒಟ್ಟು 5,600 ದನದ ಶೆಡ್​ ಹಾಗೂ 625 ಮೇಕೆ ಮತ್ತು ಕುರಿ ಶೆಡ್​ಗಳ ನಿಮಾರ್ಣಕ್ಕೆ ರೈತರಿಂದ ಬೇಡಿಕೆ ಹೆಚ್ಚಿದೆ ಎಂದು ನರೇಗಾ ಯೋಜನೆಯ ಜಿಲ್ಲಾ ಐಇಸಿ ಸಂಯೋಜಕ ಸಿ.ಆನಂದ್​ ತಿಳಿಸಿದ್ದಾರೆ.

"ಜಾನುವಾರುಗಳ ಶೆಡ್​ ನಿಮಾರ್ಣ ಮಾಡಿಕೊಳ್ಳಲು ನರೇಗಾ ಯೋಜನೆಯಡಿ ಗ್ರಾಪಂಗಳ ಮೂಲಕ ಹಣ ಬಿಡುಗಡೆಯಾಗುತ್ತಿದೆ. ಆದರೆ, ಶೆಡ್​ ಬೇಕು ಎಂದು ಗ್ರಾಪಂಗೆ ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಜಿಪಂನಿಂದ ಅಪ್ರೂವಲ್​ ಆಗಿ ಬರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಮಗಾರಿ ಪ್ರಾರಂಭಿಸಲು ಕಾರ್ಯಾದೇಶ ನೀಡಿ ಎಂದರೆ ಸತಾಯಿಸುತ್ತಾರೆ. ಹಣ ನೀಡಿದವರಿಗೆ ಬೇಗ ಕಾರ್ಯಾದೇಶ ನೀಡುತ್ತಾರೆ. ನಿಮಾರ್ಣ ಮಾಡಿದ ನಂತರ ಕೊಡುವ 60 ರಿಂದ 70 ಸಾವಿರಕ್ಕೆ ಲಂಚ ನೀಡಿದರೆ ಮಾತ್ರ ಲಾನುಭವಿಗಳಿಗೆ ಹಣ ನೀಡಲಾಗುತ್ತದೆ. ಇದರಿಂದಾಗಿ ಶೆಡ್​ ನಿಮಾರ್ಣ ಅವಶ್ಯ ಇದ್ದರೂ ಗ್ರಾಪಂನಲ್ಲಿ ಹಣಕ್ಕಾಗಿ ಮತ್ತು ಕಾರ್ಯಾದೇಶಕ್ಕಾಗಿ ವರ್ಷಗಳೇ ಕಾಯಬೇಕಾದ ದುಸ್ಥಿತಿ ಇದೆ."

 -ಚಿಕ್ಕವೆಂಕಟರೆಡ್ಡಿ ಹೊಸಹಳ್ಳಿ, ಶ್ರೀನಿವಾಸಪುರ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net