ಗ್ರಾಮೀಣರ ಬದುಕಿಗೆ ‘ನರೇಗಾ’ ಆಸರೆ

19MDG1 ABHIYANA
Published on

ಮುಂಡರಗಿ: ನರೇಗಾ ಯೋಜನೆಯು ಹಳ್ಳಿಗಳ ಅಭಿವೃದ್ಧಿ ಮತ್ತು ರೈತರ ಜೀವನ ಗುಣಮಟ್ಟ ಸುಧಾರಿಸಿ ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗಿವೆ. ಪ್ರತಿಯೊಬ್ಬರೂ ಸರ್ಕಾರದ ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.

ತಾಲೂಕಿನ ಡೋಣಿ ಗ್ರಾಮದಲ್ಲಿ ವೈಯಕ್ತಿಕ ಕಾಮಗಾರಿಗಳ ವಿತರಣೆ ಮೇಳ, ಬೇಡಿಕೆ ಅಭಿಯಾನಕ್ಕೆ ಚಾಲನೆ ಹಾಗೂ ಮನೆ-ಮನೆಗೆ ಭೇಟಿ ನೀಡಿ ನರೇಗಾ ಕರಪತ್ರ ವಿತರಿಸಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿ ಪ್ರತಿಯೊಂದು ಉದ್ಯೋಗ ಚೀಟಿಗೂ 100 ದಿನಗಳ ಕೆಲಸ ನೀಡಲಾಗುತ್ತದೆ. ಪುರುಷ ಹಾಗೂ ಮಹಿಳೆಯರಿಗೆ 349 ರೂ. ಸಮಾನ ಕೂಲಿ ನೀಡಲಾಗುತ್ತದೆ. ಇದರಿಂದ ವರ್ಷವೊಂದಕ್ಕೆ 34,900 ಕೂಲಿ ಪಡೆಯಬಹುದು. ಈಗ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಗಳಿಂದಲೂ ಸಣ್ಣ ಹಾಗೂ ಅತೀ ಸಣ್ಣ ರೈತರು ವೈಯಕ್ತಿಕ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿದರೆ ಹಲವಾರು ಬೆಳೆಗಳನ್ನು ಸಹಾಯಧನದಡಿ ಬೆಳೆಯಬಹುದು ಎಂದರು.

ಕೂಲಿಕಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಭಾಗದಲ್ಲಿ ಇದುವರೆಗೂ ನರೇಗಾ ಯೋಜನೆ ಲಾಭ ಪಡೆಯದ ರೈತರನ್ನು ಗುರಿಯಾಗಿಸಿ ಅಭಿಯಾನವನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಕೋಳಿ ಶೆಡ್, ದನದದೊಡ್ಡಿ, ಬಾಳೆ, ಪಪ್ಪಾಯಿ, ದಾಳಿಂಬೆ, ಮಲ್ಲಿಗೆ, ಬಾರೆ, ಡ್ರಾಗನ್ ಫೂ›ಟ್, ಕೃಷಿ ಹೊಂಡ ಸೇರಿ ಮುಂತಾದ ಕಾಮಗಾರಿಗಳನ್ನು ರೈತರು ಆರ್ಥಿಕ ಸಹಾಯ ಪಡೆದು ಬೆಳೆಯಬಹುದಾಗಿದೆ ಎಂದರು.

ಪಿಡಿಒ ಪಾರ್ವತಿ ಹೊಂಬಳ, ಗ್ರಾಪಂ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net