ನಕಲಿ ಜಾಬ್‌ಕಾರ್ಡಗಳಿಗೆ ಕೂಲಿ ಹಣ ಜಮೆ

DEVADURGA
ದೇವದುರ್ಗ ತಾಲೂಕು ಜಾಲಹಳ್ಳಿ ಗ್ರಾಪಂಯಲ್ಲಿ ನರೇಗಾ ಕಾಮಗಾರಿಗಳ ಸಾಮಾಜಿಕ ಲೆಕ್ಕಪರಿಶೋಧನ ವಿಶೇಷ ಗ್ರಾಮಸಭೆ ಜರುಗಿತು. ಸಾಮಾಜಿಕ ಲೆಕ್ಕಪರಿಶೋಧನ ಜಿಲ್ಲಾ ಸಂಯೋಜಕ ಶ್ರೀಧರ್ ದೇಸಾಯಿ, ಜಿಲ್ಲಾ ಸಂಯೋಜಕಿ ಸುಲೋಚನ ಗ್ರಾಪಂ ಅಧ್ಯಕ್ಷೆ ರೇವತಿ ಪಾಟೀಲ್, ಉಪಾಧ್ಯಕ್ಷೆ ಸಲ್ಮಾ ಬೇಗಂ, ಪಿಡಿಒ ಪತ್ತ್ಯಪ್ಪ ರಾಠೋಡ್ ಇದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಪಂ ಕಚೇರಿ ಅವರಣದಲ್ಲಿ ನರೇಗಾ ವಿವಿಧ ಕಾಮಗಾರಿಗಳ ಸಾಮಾಜಿಕ ಲೆಕ್ಕಪರಿಶೋಧನ ವಿಶೇಷ ಗ್ರಾಮಸಭೆಯಲ್ಲಿ ಗುರುವಾರ ಸಾರ್ವಜನಿಕರ ಹಲವು ದೂರುಗಳಿಗೆ ಸಾಕ್ಷಿಯಾಯಿತು.

ನಕಲಿ ಬೋಗಸ್ ಕಾರ್ಡ್ ಸೃಷ್ಟಿ

ಗ್ರಾಮದಲ್ಲಿ 2214 ಕುಟುಂಬಗಳಿವೆ. ಆದರೆ 3011 ಜಾಬ್‌ಕಾರ್ಡ್‌ಗಳನ್ನು ನೀಡಲಾಗಿದೆ. ಕೆಲವರು ಬೋಗಸ್ ಜಾಬ್‌ಕಾರ್ಡ್ ಸೃಷ್ಟಿಗಾಗಿ ನಕಲಿ ಅರ್ಜಿಗಳು ಸಲ್ಲಿಸಿದ್ದಾರೆ. 14 ದಿನ ಕೂಲಿ ಕೆಲಸವಾದ ನಂತರ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ನಕಲಿ ಜಾಬ್‌ಕಾರ್ಡ್ ಸೃಷ್ಟಿದಾರರಿಗೆ ಪೋನ್ ಪೇ ಮೂಲಕ ಹಣ ವರ್ಗಾವಣೆ ಮಾಡುವ ದಂಧೆ ಚಾಲ್ತಿಯಲ್ಲಿದೆ ಎಂದು ಜನರು ದೂರಿದರು.

ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು, ಧಾರವಾಡ ಸೇರಿ ನಗರಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದಾರೆ. ಆದರೂ ಅವರ ಬ್ಯಾಂಕ್ ಖಾತೆಗೆ ನರೇಗಾ ಯೋಜನೆ ಕೂಲಿ ಹಣ ಜಮೆ ಮಾಡಲಾಗುತ್ತಿದೆ. ಇದರ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳ ಬೇಕು ಎಂದು ವಕೀಲ ರಾಜಾ ವಾಸುದೇವ ನಾಯಕ ಒತ್ತಾಯಿಸಿದರು.

ಸಾಮಾಜಿಕ ಲೆಕ್ಕಪರಿಶೋಧನ ಜಿಲ್ಲಾ ಸಂಯೋಜಕ ಶ್ರೀಧರ್ ದೇಸಾಯಿ ಮಾತನಾಡಿ, ನರೇಗಾದಡಿ ಕಳೆದ 3ವರ್ಷದಲ್ಲಿ 11.1ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಲ್ಲಿ ಕೂಲಿಕಾರರಿಗೆ 8.9 ಕೋಟಿ ರೂ.ಪಾವತಿಸಲಾಗಿದೆ. ಸಾಮಗ್ರಿ ವೆಚ್ಚಕ್ಕಾಗಿ 2.3 ಕೋಟಿ ರೂ. ಪಾವತಿಸಲಾಗಿದೆ. ಇದರಲ್ಲಿ ಯಾವುದೇ ಸರಿಯಾದ ದಾಖಲೆಗಳಲ್ಲಿದೆ 3.98 ಕೋಟಿ ರೂ. ಪಾವತಿಯಾಗಿರುವುದು ಕಂಡು ಬಂದಿದೆ. ದುರ್ಬಳಕೆ ಮಾಡಿಕೊಂಡ ಅಥವಾ ಹೆಚ್ಚುವರಿಯಾಗಿ ಪಾವತಿಸಿದ 39ಲಕ್ಷ ರೂ. ಮರಳಿ ಇಲಾಖೆಗೆ ಪಾವತಿಸಬೇಕಾಗಿದೆ ಎಂದು ಸೂಚಿಸಿದರು.

ನರೇಗಾ ಯೋಜನೆ ಸಮರ್ಪಕ ಬಳಕೆ ಮಾಡಿಕೊಂಡು ಕೂಲಿಕಾರರ ಬದುಕು ಕಟ್ಟಿಕೊಳ್ಳಲು ಎಲ್ಲರೂ ಕೆಲಸ ಮಾಡಬೇಕು. 2020-21ರಿಂದ 2022-23ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 807 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಎಲ್ಲವನ್ನೂ ಸಾಮಾಜಿಕ ಲೆಕ್ಕಪರಿಶೋಧನ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಂಯೋಜಕಿ ಸುಲೋಚನ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಎಂ.ವೀರಪ್ಪ, ಕಾರ್ಯಕ್ರಮ ವ್ಯವಸ್ಥಾಪಕ ಲಕ್ಷ್ಮಣ ಚಿಕ್ಕೊಡಿ, ಪ್ರಮುಖರಾದ ನಾಗೇಶ ಮಡಿವಾಳ ಖಾನಾಪುರ, ಸಂಜೀವು ಕೋಲ್ಕಾರ್, ಜಯಕುಮಾರ, ಶಂಭು ತಿಗಡಿ, ದುಂಡಪ್ಪ ಆಶಿರೊಟ್ಟಿ, ಗ್ರಾ.ಪಂ ಅಧ್ಯಕ್ಷೆ ರೇವತಿ ಪಾಟೀಲ್, ಉಪಾಧ್ಯಕ್ಷೆ ಸಲ್ಮಾ ಬೇಗಂ, ಪಿಡಿಒ ಪತ್ತ್ಯಪ್ಪ ರಾಠೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net