

ವಿಜಯಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ (2023-24ನೇ ಸಾಲಿಗೆ) ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಯೊಂದು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.
ಬೆಳಗಾವಿ ವಿಭಾಗದ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರಕ್ಕೆ ರೇಷ್ಮೆ ಇಲಾಖೆ, ಅತ್ಯುತ್ತಮ ತಾಲೂಕು ಪಂಚಾಯಿತಿ ಪುರಸ್ಕಾರಕ್ಕೆ ನಿಡಗುಂದಿ ಹಾಗೂ ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರಕ್ಕೆ ರೂಗಿ ಗ್ರಾಮ ಪಂಚಾಯಿತಿ ಭಾಜನವಾಗಿದ್ದು, ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್‌ನ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ‘ನರೇಗಾ ಹಬ್ಬ-2025’ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಿಇಒ ರಿಷಿ ಆನಂದ ಪ್ರಶಸ್ತಿ ಸ್ವೀಕರಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಸಿದ್ದರಾಜು ಎಸ್, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ, ಇಂಡಿ ತಾಪಂ ಸಹಾಯಕ ನಿರ್ದೇಶಕ(ಗ್ರಾ.ಉ) ಸಂಜಯ ಖಡಗೇಕರ, ರೂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಯಶವಂತ ಹೊಸಮನಿ, ಪಿಡಿಒ ಬಸವರಾಜ ಬಬಲಾದ ಕಾರ್ಯಕ್ರಮದಲ್ಲಿ ಇದ್ದರು.