ನರೇಗಾ ಯೋಜನೆಯಡಿ ಅಗತ್ಯ ಕಾಮಗಾರಿಗಳ ಹೆಸರು ಬರೆಸಿ

Narega Project, Works, PS Kasanakki NREG, Gram Sabha, Muddebihala, Kavadimatty
ಕವಡಿಮಟ್ಟಿಯಲ್ಲಿ ಎನ್‌ಆರ್‌ಇಜಿ ಗ್ರಾಮಸಭೆಯಲ್ಲಿ ಪಿಡಿಒ ಪಿ.ಎಸ್.ಕಸನಕ್ಕಿ ಮಾತನಾಡಿದರು. ಶಕುಂತಲಾ ಹಂಡರಗಲ್ಲ, ಶ್ರೀದೇವಿ ಬಿರಾದಾರ, ಸಿದ್ರಾಮಯ್ಯ ಗುರುವಿನ, ಅನೀಲ ಚವ್ಹಾಣ ಇತರರಿದ್ದರು.
Published on

ಮುದ್ದೇಬಿಹಾಳ: 2025-25ನೇ ಸಾಲಿನ ಎನ್‌ಆರ್‌ಇಜಿ ಕ್ರಿಯಾಯೋಜನೆ ತಯಾರಿಸುವ ಕಾರ್ಯ ಪ್ರಾರಂಭವಾಗಿದ್ದು, ಗ್ರಾಪಂಗಳ ವ್ಯಾಪ್ತಿಯ ಸಾರ್ವಜನಿಕರು ಅಗತ್ಯ ಕಾಮಗಾರಿಗಳ ಹೆಸರು ಬರೆಸಿ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ (ನರೇಗಾ), ಪಿಡಿಒ ಪಿ.ಎಸ್.ಕಸನಕ್ಕಿ ಹೇಳಿದರು.

ಕವಡಿಮಟ್ಟಿ ಗ್ರಾಪಂ ಆವರಣದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿ) ಕ್ರಿಯಾಯೋಜನೆ ತಯಾರಿಕೆ ಕುರಿತಾದ ಗ್ರಾಮಸಭೆಯಲ್ಲಿ ಗುರುವಾರ ಮಾತನಾಡಿದರು.

ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ನಡೆಸಿ ಗ್ರಾಪಂ ವ್ಯಾಪ್ತಿಯ ಕವಡಿಮಟ್ಟಿ, ಸರೂರ, ಶಿರೋಳ, ಸರೂರ ತಾಂಡಾ, ಜಲಪೂರ ಸೇರಿ 6 ವಾರ್ಡ್‌ಗಳಲ್ಲಿ ಸಭೆ ನಡೆಸಿ 198 ಕಾಮಗಾರಿಗಳ ಬೇಡಿಕೆ ಅರ್ಜಿ ಸ್ವೀಕರಿಸಲಾಗಿದೆ. ಇವುಗಳ ಅನುಮೋದನೆ ಕುರಿತು ಗ್ರಾಮಸಭೆಯಲ್ಲಿ ಚರ್ಚಿಸಿ ಕ್ರಿಯಾಯೋಜನೆ ರೂಪಿಸಲಾಗುತ್ತದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಅನೀಲ ಚವ್ಹಾಣ ಮಾತನಾಡಿ, ನರೇಗಾ ಯೋಜನೆಯಡಿ ರಸ್ತೆ ಬದಿ, ಗೋಮಾಳ, ಸರ್ಕಾರಿ ಜಾಗದಲ್ಲಿ ನೆಡುತೋಪು ನಿರ್ಮಾಣ, ರೈತರ ಜಮೀನುಗಳಲ್ಲಿ ಶ್ರೀಗಂಧ, ಹೆಬ್ಬೇವು, ಅರಣ್ಯ ಕೃಷಿಗೆ ಅವಕಾಶವಿದ್ದು ರೈತರು ಬೇಡಿಕೆ ಸಲ್ಲಿಸಬಹುದು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಗ್ರಾಪಂ ಸದಸ್ಯ ಹನುಮಂತ ಹಂಡರಗಲ್ ಮಾತನಾಡಿ, ರಸ್ತೆ ಬದಿ ಕಾಮಗಾರಿ ಪ್ರಾರಂಭಿಸಿ 4 ವರ್ಷ ನಿರ್ವಹಣೆ ವೆಚ್ಚ ಭರಿಸುತ್ತೀರಿ. ಇದರಿಂದ ಯಾರಿಗೂ ಪ್ರಯೋಜನವಾಗದೆ ಸರ್ಕಾರದ ದುಡ್ಡು ಪೋಲಾಗುತ್ತಿದೆ. ಕಾಮಗಾರಿ ಅನುಷ್ಠಾನಗೊಂಡ ಸ್ಥಳಗಳಲ್ಲೇ ಮತ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೂರಿದ ಅವರು, ರೈತರಿಗೆ ಅರಣ್ಯ ಕೃಷಿ ಬಗ್ಗೆ ಮಾಹಿತಿ ನೀಡಿ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯ ತೇರದಾಳ ಮಾತನಾಡಿ, ಗ್ರಾಮೀಣ ಪ್ರದೇಶದ ಆರೋಗ್ಯ ಸುಧಾರಣೆಗೆ ಪ್ರತಿಯೊಬ್ಬರೂ ಶೌಚಗೃಹ ಕಟ್ಟಿಸಿ ಬಳಕೆ ಮಾಡಬೇಕು. ಇದಕ್ಕಾಗಿ ಜಾಗೃತಿ ಮೂಡಿಸಲು ಡಿ.10 ರವರೆಗೆ ಶೌಚಗೃಹ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಪಂ ಕಾರ್ಯದರ್ಶಿ ಅಶೋಕ ಕೊರವೇರ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್, ಉಪಾಧ್ಯಕ್ಷೆ ಶ್ರೀದೇವಿ ಬಿರಾದಾರ, ಸದಸ್ಯರಾದ ಸಿದ್ರಾಮಯ್ಯ ಗುರುವಿನ, ಸಿದ್ದಮ್ಮ ಬಳಬಟ್ಟಿ, ದ್ಯಾವಣ್ಣ ಹುಣಶ್ಯಾಳ, ಸಹಾಯಕ ತೋಟಗಾರಿಕೆ ಅಧಿಕಾರಿ ಸಿದ್ದಪ್ಪ ಮದರಖಂಡಿ, ಐಇಸಿ ಸಂಯೋಜಕ ಪರಮೇಶ ಹೊಸಮನಿ, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅನೀಲ ಚವ್ಹಾಣ, ಮುಖ್ಯಶಿಕ್ಷಕ ಎನ್.ಬಿ.ನಾವದಗಿ, ಸಿಎಚ್‌ಒ ಜ್ಯೋತಿ ಬಿರಾದಾರ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net