

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದರಿಂದ ಅತ್ತ ಕೂಲಿಕಾರರ ಸಂಜೀವಿನಿಯಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಂಡಿದೆ.
ತಮ್ಮ ನೋವಿಗೆ ಸ್ಪಂದಿಸುತ್ತಿಲ್ಲವೆನ್ನುವ ಕಾರಣದಿಂದ ರಾಜ್ಯಸರ್ಕಾರದ ವಿರುದ್ಧ ನೌಕರರು ಅಸಹಕಾರ ಹೋರಾಟ ಮಾಡುತ್ತಿದ್ದಾರೆ. ಪರಿಣಾಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕೆಲಸವೂ ನಡೆಯುತ್ತಿಲ್ಲ. ಅದರಂತೆ ಅ.4ರಿಂದ ನರೇಗಾ ಯೋಜನೆ ಕೂಡ ಸ್ಥಗಿತವಾಗಿದೆ. ದಿನಗೂಲಿ ನಂಬಿ ಬದುಕು ನಡೆಸುತ್ತಿರುವ ಲಕ್ಷಾಂತರ ಕೂಲಿಕಾರರು ಉದ್ಯೋಗಕ್ಕಾಗಿ ಪರಿತಪಿಸುವಂತಾಗಿದೆ.
44.11 ಲಕ್ಷ ಕೂಲಿಕಾರರು: ನರೇಗಾ ಯೋಜನೆಯಲ್ಲಿ ಜಿಲ್ಲೆಯಲ್ಲಿ 3.49 ಲಕ್ಷ ಸೇರಿದಂತೆ ರಾಜ್ಯದಲ್ಲಿ 80.19 ಲಕ್ಷ ಜಾಬ್‌ಕಾರ್ಡ್‌ದಾರರಿದ್ದಾರೆ. ಈ ಪೈಕಿ ಮಂಡ್ಯದಲ್ಲಿ 1.67 ಲಕ್ಷ ಸೇರಿ ರಾಜ್ಯದಲ್ಲಿ 44.11 ಲಕ್ಷ ಕೂಲಿಕಾರರು ಸಕ್ರಿಯವಾಗಿದ್ದಾರೆ. ಮಾತ್ರವಲ್ಲದೆ ಯೋಜನೆಯಡಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ.
ಇನ್ನು ಪ್ರತಿನಿತ್ಯ ಜಿಲ್ಲೆಯೊಂದರಲ್ಲಿಯೇ ಸುಮಾರು 16 ಸಾವಿರ ಎನ್‌ಎಂಆರ್(ಮಾನವ ದಿನಗಳ ಹಾಜರಾತಿ ನೋಂದಣಿ) ಆಗುತ್ತಿತ್ತು. ಆದರೆ ನೌಕರರ ಪ್ರತಿಭಟನೆ ಬಳಿಕ ಶೂನ್ಯವಾಗಿದೆ. ಈ ನಡುವೆ ಹಿರಿಯ ಅಧಿಕಾರಿಗಳ ಮನವಿ ಮೇರೆಗೆ ಕೆಲ ಗ್ರಾಪಂನಲ್ಲಿ ಅಧಿಕಾರಿಗಳು ಎನ್‌ಎಂಆರ್ ಮಾಡಿದ್ದಾರೆ. ಆದರೂ ಸಂಖ್ಯೆ ಕುಸಿತವಾಗಿದೆ. ನರೇಗಾ ಯೋಜನೆಯಡಿ ಹೆಚ್ಚಾಗಿ ಕೆರೆ, ನಾಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
ರಾಜ್ಯದ ಇತಿಹಾಸದಲ್ಲಿ ಕೋವಿಡ್ ಬಳಿಕ ನರೇಗಾ ಯೋಜನೆ ಸ್ಥಗಿತಗೊಂಡಿದೆ ಎನ್ನುವುದು ಅಧಿಕಾರಿಗಳ ಮಾಹಿತಿ. ಕರೊನಾ ಅಲೆ ಜೋರಾಗಿ ಲಾಕ್‌ಡೌನ್ ಆದ ವೇಳೆ ಮಾತ್ರ ರಾಜ್ಯದಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಕೋವಿಡ್ ಅಲೆಗಳ ನಡುವೆಯೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಹಾಗೂ ಕೂಲಿಕಾರರಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಯೋಜನೆ ಮುಂದುವರೆಸಲು ಅವಕಾಶ ಕಲ್ಪಿಸಲಾಗಿತ್ತು. ಮಾತ್ರವಲ್ಲದೆ ಕರೊನಾ ಅವಧಿಯಲ್ಲಿ ನರೇಗಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಕಾರಣ, ಕೂಲಿಕಾರರಿಗೆ ಅನುಕೂಲವಾಗಬೇಕೆನ್ನುವುದಾಗಿತ್ತು. ಆದರೀಗ ರಾಜ್ಯಸರ್ಕಾರದ ಧೋರಣೆ ಖಂಡಿಸಿ ನೌಕರರು ಅನಿರ್ದಿಷ್ಟಾವಧಿ ಧರಣಿ ಕುಳಿತಿರುವುದರಿಂದ ಮಹತ್ವದ ಯೋಜನೆ ನಿಲ್ಲಿಸುವಂತಾಗಿದೆ.
ಪ್ರಸ್ತುತ ಜನರಿಗೆ ಸಮಸ್ಯೆಯಾಗದಂತೆ ಅಗತ್ಯ ಸೇವೆಗಳಾದ ಕುಡಿಯುವ ನೀರು, ಕಸ ವಿಲೇವಾರಿ, ಬೀದಿದೀಪ ನಿರ್ವಹಣೆ ಕೆಲಸವನ್ನು ನೌಕರರು ಮಾಡುತ್ತಿದ್ದಾರೆ. ರಾಜ್ಯಸರ್ಕಾರ ಮತ್ತದೇ ನಿರ್ಲಕ್ಷೃ ತೋರಿದರೆ ಇದನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೌಕರರು ನೀಡಿದ್ದಾರೆ.
ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಸೇವೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ನರೇಗಾ ಯೋಜನೆಯಲ್ಲಿ ಸಮಸ್ಯೆಯಾಗಿದೆ. ಆದಾಗ್ಯೂ ಅಧಿಕಾರಿಗಳ ಮನವೊಲಿಸಿ ಎನ್‌ಎಂಆರ್ ಮಾಡಿಸಲಾಗುತಿದೆ.ಶೇಖ್ ತನ್ವೀರ್ ಆಸಿಫ್ಜಿಪಂ ಸಿಇಒ