

ಮಂಡ್ಯ: ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಬೇಕು. ಜತೆಗೆ ಮಾನವ ದಿನ ಸೃಜನೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಕೆ.ಆನಂದ್‌ಕುಮಾರ್ ತಿಳಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಅಭಿವೃದ್ಧಿಗೆ ಸಂಬಂಧಿಸಿದ ಸಮುದಾಯ ಕಾಮಗಾರಿಗಳಾದ ಅಂಗನವಾಡಿ, ಸಶ್ಮಾನ, ಅಡುಗೆ ಕೋಣೆ, ಅಡುಗೆ ಮನೆ, ಶಾಲಾ ಕಾಂಪೌಂಡ್, ಕೆರೆ-ಕಟ್ಟೆ, ಗೋ ಕಟ್ಟೆ, ಕಲ್ಯಾಣಿ ಪುನಶ್ಚೇತನ, ಮಳೆ ನೀರು ಕೊಯ್ಲು ಹಾಗೂ ಇನ್ನಿತರೆ ಕಾಮಗಾರಿ ಒಳಗೊಂಡಂತೆ ಮನರೇಗಾಯೋಜನೆಯ ಸಿಬ್ಬಂದಿ ಸಮಗ್ರ ಅಭಿವೃದ್ಧಿಗೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಈಗಾಗಲೇ ಆರ್ಥಿಕ ವರ್ಷದ ಕ್ರಿಯಾಯೋಜನೆ ಅನುಮೋದನೆಗೊಂಡಿರುವ ಕಾಮಗಾರಿ ಪ್ರಾರಂಭಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಜನರಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಒಳಗೊಂಡಂತೆ ರೇಷ್ಮೆ , ತೋಟಗಾರಿಕೆ, ಕೃಷಿ ಇಲಾಖೆಯೂ ಸಹ ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಮನರೇಗಾ ಯೋಜನೆ ಸಿಬ್ಬಂದಿ ಹಾಜರಿದ್ದರು.