

ಭರಮಸಾಗರ: ನರೇಗಾ ಅಡಿ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಅನುದಾನ ಮೀಸಲಿರಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಉಪ ಅಂಚೆ ಕಚೇರಿಯ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ಅಂಚೆ ಕಚೇರಿಗಳ ಕೆಲಸದಲ್ಲೂ ಹಲವಾರು ಬದಲಾವಣೆಗಳು ಉಂಟಾದವು. ಡಿಜಿಟಲ್ ಪೇಮೆಂಟ್ ಶುರು ಆದ ಮೇಲೆ ಅಂಚೆ ಕಚೇರಿಗಳ ಅಸ್ತಿತ್ವಕ್ಕೆ ಕುಂದು ಉಂಟಾಯಿತು.
ಆದರೆ ಪ್ರಧಾನಿ ಮೋದಿ ಅಂಚೆ ಕಚೇರಿ ಮುಚ್ಚಲು ಅವಕಾಶ ನೀಡದೆ, ಸರ್ಕಾರದ ಹಲವು ಯೋಜನೆ ಹಾಗೂ ಗ್ರಾಮೀಣ ಜನರಿಗೆ ಜೀವಾವಿಮಾ ಸೌಲಭ್ಯ ಜಾರಿಮಾಡಲು ಅವಕಾಶ ಕಲ್ಪಿಸಿದರು ಎಂದರು.
ಇಂದು ಬ್ಯಾಂಕ್‌ಗಳೊಂದಿಗೆ ಪೈಪೋಟಿ ಮೇಲೆ ಅಂಚೆ ಕಚೇರಿಗಳು ಡಿಜಿಟಲ್ ಪೇಮೆಂಟ್ ಸಹ ಮಾಡುತ್ತಿವೆ. ಪಲಾನುಭವಿಗಳ ನೇರ ನಗದು ವರ್ಗಾವಣೆ ಸೇವೆ ಸಹ ಅಂಚೆ ಕಚೇರಿಯಲ್ಲಿ ನೀಡಲಾಗಿದೆ.
ನೇರ ನಗದು ವರ್ಗಾವಣೆ ಜಾರಿ ಮೂಲಕ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಯೋಜನೆ ತಲುಪಿಸಲಾಗುತ್ತಿದೆ ಎಂದರು.
ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾದವರ ಮನೆ ಬಾಗಿಲಿಗೆ ಅಂಚೆ ಕಚೇರಿಗಳು ಸೇವೆ ತಲುಪಿಸುತ್ತಿವೆ.
ಅಂಚೆ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿಯನ್ನು ಕುಟುಂಬದ ಅವಲಂಬಿತರಾದವರಿಗೆ ನೀಡಲು ಶೇ.5 ರಷ್ಟರ ನಿಯಮ ತೊಡಕಾಗಿದೆ.
ಸೇವೆ ಸಲ್ಲಿಸಿ ಮೃತರಾದ ನೌಕರರ ಕುಟುಂಬದವರು ಅನುಕಂಪ ಆಧಾರಿತ ನೌಕರಿ ಕೊಡಿಸುವಂತೆ ಮನವಿ ಮಾಡಿದ್ದು, ಕೇಂದ್ರದಲ್ಲಿ ಚರ್ಚಿಸಿ ಶೇ.5 ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದರು.
ಕಟ್ಟಡ ನಿರ್ಮಾಣಕ್ಕೆ ಭೂಮಿ: ಜಿಲ್ಲೆಯ ಭೀಮಸಮುದ್ರ, ಚಿಕ್ಕಜಾಜೂರು, ಮೊಳಕಾಲ್ಮೂರು ಹಾಗೂ ಪರುಶುರಾಂಪುರದಲ್ಲಿ ಅಂಚೆ ಕಚೇರಿ ಕಟ್ಟಡ
ನಿರ್ಮಾಣಕ್ಕೆ ಸೂಕ್ತ ಅನುದಾನ ಮತ್ತು ಭೂಮಿ ಮಂಜೂರು ಮಾಡಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಬಹುವರ್ಷಗಳ ಹಿಂದೆ ಅಂಚೆ ಕಚೇರಿಗಳು ಗ್ರಾಮೀಣ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಟೆಲಿಗ್ರಾಮ್ ಸಂದೇಶಕ್ಕೆ ಗ್ರಾಮದ ಬಹಳಷ್ಟು ಜನರು ಕಾತರದಿಂದ ಕಾಯುತ್ತಿದ್ದ ಕ್ಷಣ ಇತ್ತು.
ಅಂಚೆಯಣ್ಣನ ಪತ್ರಕ್ಕಾಗಿ ಎದುರು ನೋಡುತ್ತಿದ್ದರು. ಜನರ ನೋವು ನಲಿವುಗಳಲ್ಲಿ ಅಂಚೆ ಕಚೇರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು.
ನಾನು ಕೂಡ ಬಾಲ್ಯದಲ್ಲಿ ಅಂಚೇ ಕಚೇರಿಯ ಟೆಲಿಗ್ರಾಮ್ ಯಂತ್ರದ ಟಿಕ್ ಟಿಕ್ ಶಬ್ಧದತ್ತ ಕುತೂಹಲದಿಂದ ನೋಡುತ್ತಿದ್ದೆ.
ಪೋಸ್ಟ್ ಮಾಸ್ಟರ್ ಆ ಸಂದೇಶವನ್ನು ಡಿಕೋಡ್ ಮಾಡಿ ತಿಳಿಸುತ್ತಿದ್ದರು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ತಮ್ಮ ಬಾಲ್ಯದ ನೆನಪುಗಳಿಗೆ ಜಾರಿದರು.
ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಅಂಚೆ ಕಚೇರಿಯು ಗ್ರಾಮೀಣ ಭಾಗದಲ್ಲಿ ಉಳಿತಾಯ ಹಾಗೂ ವಿಮೆ ಸೌಲಭ್ಯ ನೀಡುತ್ತಿದೆ.
ಅಂಚೆ ಕಚೇರಿಯ ಉಳಿತಾಯ ಖಾತೆಗಳು ಬ್ಯಾಂಕ್ ಖಾತೆಗಳೊಂದಿಗೆ ಸಮ್ಮಿಳತಗೊಳ್ಳಲಿದ್ದು, ಬ್ಯಾಂಕ್ ಖಾತೆಗಳಂತೆ, ಅಂಚೆ ಖಾತೆಗಳ ಮೂಲಕ ಹಣಕಾಸು ವ್ಯವಹಾರ ನಡೆಸಬಹುದು ಎಂದರು.
ಅಂಚೆ ಅಧೀಕ್ಷಕ ಓ.ವಿರೂಪಾಕ್ಷಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳ ಕೊಗುಂಡೆ ಕರಿಬಸಪ್ಪ, ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ನಿವೃತ್ತ ಅಂಚೆ ಮೇಲ್ವಿಚಾರಕ ಜಿ.ಎಸ್.ಸತ್ಯಣ್ಣ, ಡಿ.ಎಸ್.ಪ್ರದೀಪ್, ಶೈಲೇಶ್ ಕುಮಾರ್, ಗುರುಬಸವರಾಜ್, ಈಶ್ವರಮ್ಮ, ಕಲ್ಲೇಶ್, ಸವಿತಾ, ನಿರಂಜನಾಮೂರ್ತಿ, ಬಸವರಾಜ್, ಸವಿತಾ, ಎಸ್.ಪಿ.ಅನು, ಲೋಕೇಶ್ ಇದ್ದರು.