

ಯಲಬುರ್ಗಾ: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಆರಂಭವಾಗಿರುವ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಾಪಂ ಇಒ ಡಾ.ಜಯರಾಮ ಚವ್ಹಾಣ ಹೇಳಿದರು.
ತಾಲೂಕಿನ ಸಂಕನೂರು ಗ್ರಾಮದ ಅಮರಪ್ಪ ಕೊಪ್ಪದ್ ಜಮೀನಿನಲ್ಲಿ ನರೇಗಾ ಯೋಜನೆಯಡಿ ಮಂಗಳವಾರ ಆರಂಭವಾದ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 37 ಗ್ರಾಪಂ ವ್ಯಾಪ್ತಿಯಲ್ಲಿ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲು ಬದು ನಿರ್ಮಾಣ, ಸಸಿ ನೆಡಲು ಗುಂಡಿ ತೆಗೆಯುವುದು, ದನದದೊಡ್ಡಿ ನಿರ್ಮಾಣ ಕಾರ್ಯ ಆರಂಭವಾಗಿವೆ. 10226 ಸಾವಿರ ಮಾನವ ದಿನಗಳು ಸೃಜನೆಯಾಗಿವೆ. 1523 ಕುಟುಂಬಗಳ ಪೈಕಿ 1200ಕ್ಕೂ ಅಧಿಕ ಕೂಲಿ ಕಾರ್ಮಿಕರು ತಾಲೂಕಾದ್ಯಂತ ಕಾಮಗಾರಿಯಲ್ಲಿ ತೊಡಗಿದ್ದಾರೆ. ದಿನಕ್ಕೆ 275 ರೂ. ನೀಡಲಾಗುತ್ತಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ, ಕುಡಿವ ನೀರು ಸೇರಿ ವಿವಿಧ ಸೌಲಭ್ಯ ಒದಗಿಸಲಾಗಿದೆ. ನರೇಗಾ ಕಾಮಗಾರಿ ಕಟ್ಟುನಿಟ್ಟಾಗಿ ನಿರ್ವಹಿಸಲು ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಂಕನೂರಿನಲ್ಲಿ ಬದು ನಿರ್ಮಾಣ ಕೆಲಸದಲ್ಲಿ 25 ಕಾರ್ಮಿಕರು ಪಾಲ್ಗೊಂಡಿದ್ದರು. ಗ್ರಾಪಂ ಪಿಡಿಒ ಶಿವರಾಜ ನಿಡಶೇಸಿ, ಇಂಜಿನಿಯರ್ ಜಗದೀಶ ನಾಯಕ್, ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಇದ್ದರು.