ನರೇಗಾ ಕೂಲಿ ಕಾರ್ವಿುಕರಿಗಿಲ್ಲ ಹಬ್ಬದ ಸಂಭ್ರಮ

NAREGA WORK
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ವಿುಕರು ಎರಡು ತಿಂಗಳಿಂದ ಕೂಲಿ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ರಾಜ್ಯಾದ್ಯಂತ ಎರಡು ತಿಂಗಳಿಂದ ಕಾರ್ವಿುಕರಿಗೆ ಸಂಬಳ ನೀಡಿಲ್ಲ.

ನರೇಗಾ ಯೋಜನೆಯಡಿ ನಿಗದಿತ 7 ದಿನದೊಳಗೆ ಕೂಲಿ ಕೆಲಸದ ಸಂಬಳವನ್ನು ಕಾರ್ವಿುಕರಿಗೆ ನೀಡಬೇಕಿದೆಯಾದರೂ ರಾಣೆಬೆನ್ನೂರ ತಾಲೂಕು ಸೇರಿ ರಾಜ್ಯಾದ್ಯಂತ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಹೀಗಾಗಿ ಸಾಲ ಮಾಡಿ ಪಂಚಮಿ ಹಬ್ಬ ಆಚರಿಸುವಂತಾಗಿದೆ ಎಂದು ಬಡ ಕಾರ್ವಿುಕರು ಆರೋಪಿಸುತ್ತಿದ್ದಾರೆ.

ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ, ತೋಟಗಾರಿಕೆ, ಅರಣ್ಯ, ಕೃಷಿ ಇಲಾಖೆ ಸೇರಿ ಒಟ್ಟು 7 ಇಲಾಖೆಗಳಿಂದ 2023-24ನೇ ಸಾಲಿನಲ್ಲಿ 14,630 ಜನರಿಂದ 2.62 ಲಕ್ಷ ಮಾನವ ದಿನಗೂಲಿ ಗುರಿ ಹೊಂದಲಾಗಿದೆ. ಅದರಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳು ಸೇರಿ ಒಟ್ಟು 3500 ಕೂಲಿ ಕಾರ್ವಿುಕರಿಂದ 81,764 ಮಾನವ ದಿನ ಕೂಲಿಗಳಾಗಿವೆ. ಸರ್ಕಾರ ಕಾರ್ವಿುಕರಿಗೆ 2.5 ಕೋಟಿ ರೂ.ಗೂ ಅಧಿಕ ಮೊತ್ತದ ಸಂಬಳ ನೀಡಬೇಕಿದೆ.

ಸರ್ಕಾರದಲ್ಲಿಲ್ಲವಂತೆ ಹಣ

ನರೇಗಾದಡಿ ಕೆಲಸ ಮಾಡುವ ಕೂಲಿ ಕಾರ್ವಿುಕರಲ್ಲಿ ಹೆಚ್ಚಿನವರು ಅದೇ ದಿನ ದುಡಿದು ಅದೇ ದಿನ ಉಣ್ಣುವ ಕಡುಬಡವರು. ಆದ್ದರಿಂದ ಕೂಲಿ ಮಾಡಿ ವಾರ ಕಳೆಯುತ್ತಿದ್ದಂತೆ ಸಂಬಳ ಕೊಡಿ ಎಂದು ಕೇಳಿದರೆ, ಅಧಿಕಾರಿಗಳು ಸರ್ಕಾರದಿಂದ ಹಣ ಬಂದಿಲ್ಲ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಕಾರ್ವಿುಕರು ಆರೋಪಿಸುತ್ತಿದ್ದಾರೆ.

ಸಾಲ ಮಾಡಿ ಹಬ್ಬ ಮಾಡಿದ್ವಿ

ಇದೀಗ ಶ್ರಾವಣ ತಿಂಗಳು. ಎಲ್ಲೆಡೆ ಹಬ್ಬದ ವಾತಾವರಣ. ಆದರೆ, ನಾವು ಪಂಚಮಿ ಹಬ್ಬಕ್ಕೆ ಬೇರೆಯವರ ಕಡೆಯಿಂದ ಕೈಗಡ ಸಾಲ ತಂದು ಮಕ್ಕಳಿಗೆ ಬಟ್ಟೆ , ಸಾಮಗ್ರಿಗಳನ್ನು ತಂದಿದ್ದೇವೆ. ಈಗ ವರಮಹಾಲಕ್ಷ್ಮೀ ಹಬ್ಬ ಬಂದಿದ್ದು, ನಮ್ಮ ಪಾಲಿಗೆ ಅದು ಇಲ್ಲ ಎನ್ನುವಂತಾಗಿದೆ. ನಾವು ಕೂಲಿ ಸಂಬಳ ನೆಚ್ಚಿಕೊಂಡೇ ಹಬ್ಬ ಮಾಡೋರು. ಆದರೆ, ಸರ್ಕಾರದಿಂದ ಇನ್ನೂ ಕೂಲಿ ಹಣ ಬಂದಿಲ್ಲ ಎಂದು ನರೇಗಾದ ಮಹಿಳಾ ಕೂಲಿ ಕಾರ್ವಿುಕರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆಂಟ್, ಬಸ್ ಸೇರಿ ಏನೇನೋ ಪುಕ್ಕಟೆ ಕೊಟ್ಟಿದ್ದಾರೆ. ನಾವು ಬೆವರು ಸುರಿಸಿ ದುಡಿದೀವಿ. ನಮ್ಮ ಸಂಬಳ ಕೊಡದೆ ಕಾಯಿಸೋದು ಸರಿಯಾ? ಅಧಿಕಾರಿಗಳು ನಾಳೆ-ನಾಡಿದ್ದು ಎಂದು ಹೇಳುವ ಬದಲು ಕೂಡಲೇ ನಮ್ಮ ಸಂಬಳ ಕೋಡಿಸೋಕೆ ವ್ಯವಸ್ಥೆ ಮಾಡಬೇಕು. ತಪ್ಪಿದರೆ ಎಲ್ಲರೂ ಹೋಗಿ ತಾಕಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ಮಾಡುತ್ತೇವೆ. | ರೇಣುಕವ್ವ, ನೊಂದ ಕೂಲಿ ಕಾರ್ವಿುಕ ಮಹಿಳೆ ರಾಣೆಬೆನ್ನೂರ ಮಾತ್ರವಲ್ಲ, ಬೇರೆ ತಾಲೂಕುಗಳಲ್ಲಿಯೂ ನರೇಗಾ ಕೂಲಿ ಕಾರ್ವಿುಕರಿಗೆ ಸಂಬಳವಾಗಿಲ್ಲ. ಆ. 17ರಂದು ಇಲಾಖೆಯಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿಯಿದೆ. ಆದರೆ, ಕಾರ್ವಿುಕರ ಖಾತೆಗೆ ಇನ್ನೂ ಜಮಾ ಆಗಿಲ್ಲ. | ಸುಮಲತಾ, ತಾಪಂ ಇಒ, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net