

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹಳ್ಳಿಗಳ ಸಮಗ್ರ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಆರಂಭಿಸಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಬೆಳಗಾವಿ ಜಿಲ್ಲೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
2022ರ ಮಾರ್ಚ್ ಅಂತ್ಯದೊಳಗೆ ಜಿಲ್ಲೆಗೆ 1.25 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದ್ದು, ನವೆಂಬರ್ ಅಂತ್ಯದ ವರೆಗೆ 1,03,60,347 ಮಾನವ ದಿನ ಸೃಜನೆ ಮಾಡಲಾಗಿದೆ. ಆ ಮೂಲಕ ಇತರೆಲ್ಲ ಜಿಲ್ಲೆಗಳಿಗಿಂತ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲಾ ಪಂಚಾಯಿತಿ, ಖಾತ್ರಿ ಕೆಲಸದಲ್ಲಿ ತೊಡಗಿಕೊಂಡ ಕಾರ್ವಿುಕರಿಗೆ ಈವರಗೆ 296.8 ಕೋಟಿ ರೂ. ದಿನಗೂಲಿ ಪಾವತಿಸಿದೆ.
ರಾಜ್ಯಕ್ಕೆ 12 ಕೋಟಿ ಮಾನವ ದಿನ ಗುರಿ: ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಅತಿವೃಷ್ಟಿ, ಕರೊನಾ ಲಾಕ್ಡೌನ್ ಪರಿಣಾಮದಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಜನರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ. ಪುರುಷರು, ಮಹಿಳೆಯರಷ್ಟೇ ಅಲ್ಲದೆ, ರೈತರೂ ಖಾತ್ರಿ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್ಯದ 6,021ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ನಡೆಯುತ್ತಿದೆ. 68,57,345 ಕಾರ್ವಿುಕರು ಜಾಬ್ಕಾರ್ಡ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ 12 ಕೋಟಿ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗಿದೆ.
ವಿವಿಧ ಕಾಮಗಾರಿ: ಯೋಜನೆಯಡಿ ಕೆರೆ ಹೂಳೆತ್ತುವುದು, ರಸ್ತೆ, ಚರಂಡಿ, ಚಿಕ್ಕದಾದ ಡ್ಯಾಂ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಅರಣ್ಯ ಪ್ರದೇಶ ವಿಸ್ತರಣೆ, ನೀರು ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾಮಗಾರಿ ಜತೆಗೆ ವೈಯಕ್ತಿಕ ಕಾಮಗಾರಿಗಳಲ್ಲಿಯೂ ಅಪಾರ ಸಾಧನೆ ಮಾಡಲಾಗಿದೆ ಎಂದು ಬೆಳಗಾವಿ ಜಿಪಂ ನರೇಗಾ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ ಅಂತ್ಯದ ವೇಳೆಗೆ 1.03 ಕೋಟಿ ಮಾನವ ದಿನ ಸೃಜನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಬೆಳಗಾವಿ ಜಿಪಂ ಪ್ರಥಮ ಸ್ಥಾನದಲ್ಲಿದೆ. 2022ರ ಮಾರ್ಚ್ ತಿಂಗಳವರೆಗೆ ಗುರಿಯ ದಿನ ಬಾಕಿ ಇದ್ದು, ಇನ್ನೂ ಹೆಚ್ಚಿನ ಮಾನವ ದಿನ ಸೃಜಿಸುತ್ತೇವೆ.
| ಎಚ್.ವಿ.ದರ್ಶನ ಜಿಲ್ಲಾ ಪಂಚಾಯಿತಿ ಸಿಇಒ, ಬೆಳಗಾವಿ
451 ಕೋಟಿ ರೂ. ಪಾವತಿ: 2021-22ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಮಗಾರಿಗಳ ಯಂತ್ರೋಪಕರಣ, ಸಾಮಗ್ರಿಗಳು ಮತ್ತು ಕಾರ್ವಿುಕರಿಗೆ ಈವರೆಗೆ 451 ಕೋಟಿ ರೂ. ಪಾವತಿಸಲಾಗಿದೆ. ಇದರಲ್ಲಿ ನರೇಗಾ ಕಾರ್ವಿುಕರ ಕೂಲಿ ಹಣ 296.8 ಕೋಟಿ ರೂ., ಸರ್ಕಾರಿ ಶಾಲಾ ಕಾಂಪೌಂಡ್, ಅಂಗನವಾಡಿ ಕಟ್ಟಡಕ್ಕೆ ಹಾಗೂ ಇತರ ಕಟ್ಟಡಗಳ ಸಾಮಗ್ರಿಗಳಿಗೆಂದು 138 ಕೋಟಿ ರೂ. ಹಾಗೂ ವಸ್ತುಗಳ ಖರೀದಿ ತೆರಿಗೆಗೆ ಸುಮಾರು 17 ಕೋಟಿ ರೂ. ಪಾವತಿಯಾಗಿದೆ.
ಮಹಿಳೆಯರದ್ದೇ ಸಿಂಹಪಾಲು: ರಾಜ್ಯದಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ನರೇಗಾ ಯೋಜನೆಯಡಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 12 ಕೋಟಿ ಮಾನವ ದಿನಗಳ ಸೃಜನೆಯಲ್ಲಿ 6.30 ಕೋಟಿ ಮಹಿಳೆಯರೇ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಬೆಳಗಾವಿ, ಬಳ್ಳಾರಿ, ಕಲಬುರಗಿ, ರಾಮನಗರ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಖಾತ್ರಿ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗಾವಿ ಜಿಪಂ ವ್ಯಾಪ್ತಿಯೊಂದರಲ್ಲೇ 10 ತಿಂಗಳ ಅವಧಿಯಲ್ಲಿ 63 ಲಕ್ಷ ಮಹಿಳೆಯರು ಖಾತ್ರಿ ಕೆಲಸ ಪಡೆದಿರುವುದು ವಿಶೇಷ.