

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಗಿಡ ನೆಡುವ ಹೆಸರಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಹಣ ದೋಚುತ್ತಿರುವ ಪ್ರಕರಣ ಬಯಲಿಗೆ ಬಂದಿದೆ. ಪತ್ರಿಕೆಯ ರಿಯಾಲಿಟಿ ಚೆಕ್ನಲ್ಲಿ ಜನರ ಹಣ ಲೂಟಿ ಮಾಡುತ್ತಿರುವುದು ಬಹಿರಂಗಗೊಂಡಿದೆ.
ಹೌದು…, ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ರಾಜ್ಯದ ಎಲ್ಲೆಡೆ ನರೇಗಾ ಯೋಜನೆಯಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯುತ್ತಿದೆ. ಪರಿಸರ ಬೆಳೆಸುವ ಈ ಕಾರ್ಯಕ್ರಮ ಉತ್ತಮವಾಗಿದ್ದರೂ, ಈ ನೆಪದಲ್ಲಿ ಜನರ ತೆರಿಗೆ ಹಣ ದೋಚಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ಥಳಿಯ ರಾಜಕೀಯ ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎನ್ನಲಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ವಲಯದ ವತಿಯಿಂದಲೂ ತಾಲೂಕಿನ ಹಲವು ಗ್ರಾಪಂಗಳಲ್ಲಿ ಗಿಡನೆಡುವ ಕಾರ್ಯಕ್ರಮ ಆರಂಭಗೊಂಡಿದೆ.
ಏನಿದು ಯೋಜನೆ?: ರಸ್ತೆ, ಸ್ಮಶಾನ, ಗುಂಡುತೋಪು, ಶಾಲೆ, ಆಸ್ಪತ್ರೆ ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು ಈ ಯೋಜನೆಯ ಉದ್ದೇಶ. ಮಹಾಗನಿ, ಬಸರಿ, ಆಲ, ಹುಲಚಿ, ಜಮ್ಮುನೇರಳೆ ಸೇರಿ ವಿವಿಧ ಜಾತಿಯ ಸಸಿಗಳನ್ನು ಇಲಾಖೆ ವತಿಯಿಂದಲೇ ವಿತರಿಸಲಾಗುತ್ತದೆ. ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನರೇಗಾ ಯೋಜನೆ ಮೂಲಕ ಒಂದು ಸಸಿ ನೆಡಲು 372 ರೂ. ಕೂಲಿ ನೀಡಲಾಗುತ್ತದೆ. ಇನ್ನು ಈ ಗಿಡಕ್ಕೆ ಕಡ್ಡಿ, ಮುಳ್ಳು, ನೀರು ಸೇರಿ ಅದರ ನಿರ್ವಹಣೆ ಇಲಾಖೆಯದ್ದೇ ಆಗಿರುತ್ತದೆ. ಜಾಗದ ಅನುಗುಣವಾಗಿ ಎಷ್ಟು ಗಿಡಗಳನ್ನು ಬೇಕಾದರೂ ನೆಡಬಹುದಾಗಿದೆ.
ರಿಯಾಲಿಟಿ ಚೆಕ್: ಚನ್ನಪಟ್ಟಣ ತಾಲೂಕಿನಲ್ಲಿ ನಡೆಯುತ್ತಿರುವ ಗಿಡ ನೆಡುವ ಯೋಜನೆಯ ಲೋಪದೋಷಗಳ ಬಗ್ಗೆ ಪತ್ರಿಕೆಯ ಜು.4ರ ಸಂಚಿಕೆಯಲ್ಲಿ "ಹಳ್ಳ ಹಿಡಿದ ಗಿಡನೆಡುವ ಯೋಜನೆ' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರೊಂದಿಗೆ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲು ರಿಯಾಲಿಟಿ ಚೆಕ್ ಕೂಡ ನಡೆಸಲಾಯಿತು. ತಾಲೂಕಿನ ಕೂಡ್ಲೂರು ರಸ್ತೆಯ ಬದಿಯಲ್ಲಿ ಗಿಡ ನೆಡುತ್ತಿದ್ದ ವಲಸೆ ಕೂಲಿ ಕಾರ್ಮಿಕರನ್ನು ಮಾತನಾಡಿಸಿದಾಗ ಯೋಜನೆಯ ಹೆಸರಿನಲ್ಲಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿರುವುದು ಗೊತ್ತಾಗಿದೆೆ. ಸರ್ಕಾರ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಸಲುವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಕೇವಲ ಕಡತಕ್ಕೆ ಸೀಮಿತ ಎನ್ನುವುದು ಬಹಿರಂಗಗೊಂಡಿದೆ. ಗಿಡನೆಡುವ ಕಾರ್ಯಕ್ರಮವನ್ನು ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಪ್ರಭಾವಿಗಳು ಸೇರಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬಹಿರಂಗಗೊಂಡಿದೆ.
ವಲಸೆ ಕಾರ್ಮಿಕರಿಗೆ ಉಪಗುತ್ತಿಗೆ: ಸಸಿ ನೆಡುವ ಯೋಜನೆಯಲ್ಲಿ ನರೇಗಾ ಜಾಬ್ಕಾರ್ಡ್ ಹೊಂದಿರುವವರು ಹೆಸರಿಗೆ ಮಾತ್ರ. ಆದರೆ, ಸಸಿ ನೆಡಲು ದೂರದ ಊರುಗಳಿಂದ ಬಂದಿರುವ ವಲಸೆ ಕಾರ್ಮಿಕರು ಉಪಗುತ್ತಿಗೆ ಪಡೆದು ಕಾಯಕ ನಿರ್ವಹಿಸುತ್ತಿದ್ದಾರೆ. ಒಂದು ಸಸಿ ನೆಟ್ಟು ಗುಂಡಿ ಮುಚ್ಚಲು 100ರಿಂದ 110 ರೂ.ವರೆಗೆ ದರ ನಿಗದಿಪಡಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಉದಾಹರಣೆಗೆ ಒಂದು ಸಾವಿರ ಸಸಿ ನೆಡಲು ಸರ್ಕಾರದಿಂದ ನರೇಗಾ ಯೋಜನೆಯಲ್ಲಿ 3.72 ಲಕ್ಷ ರೂ. ನೀಡಲಾಗುತ್ತದೆ. ಉಪಗುತ್ತಿಗೆ ಪಡೆಯುವವರು 1.2 ಲಕ್ಷ ರೂ.ಗಳಿಗೆ ಸಾವಿರ ಸಸಿಗಳನ್ನು ನೆಡುವ ಕಾರ್ಯ ಮಾಡಿಕೊಡುತ್ತಾರೆ. ಉಳಿದ ಹಣ ಯಾರ ಪಾಲಾಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಈ ಯೋಜನೆಯಲ್ಲಿ ಕೇವಲ ಒಂದು ಸಸಿ ನೆಡಲು 372 ರೂ. ಕೂಲಿ ನೀಡಿದರೆ, ಈ ಗಿಡಕ್ಕೆ ಕಡ್ಡಿ, ಮುಳ್ಳು, ನೀರು ಸೇರಿ ಅದರ ನಿರ್ವಹಣೆಯಲ್ಲೂ ಸಾಕಷ್ಟು ಗೋಲ್ಮಾಲ್ ನಡೆಯುತ್ತಿರುವುದು ಸ್ಪಷ್ಟವಾಗಿದೆ.
ಸರ್ಕಾರ ಪರಿಸರ ಬೆಳೆಸುವ ಜತೆಗೆ ನರೇಗಾ ಯೋಜನೆಯ ಕೂಲಿಕಾರ್ಮಿಕರಿಗೆ ಮಾನವ ದಿನ ಸೃಜಿಸುವ ಸಲುವಾಗಿ ಆರಂಭಿಸಿದ ಈ ಉತ್ತಮ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತಿರುವುದು ವಾಸ್ತವವಾಗಿದೆ.
ನರೇಗಾ ಯೋಜನೆಯ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ. ಎಲ್ಲೆಡೆ ನರೇಗಾ ಕೂಲಿ ಕಾರ್ಮಿಕರೇ ಸಸಿ ನೆಡುವ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ವಲಸೆ ಕಾರ್ಮಿಕರು ಉಪಗುತ್ತಿಗೆ ನಿರ್ವಹಿಸುತ್ತಿದ್ದಾರೆ ಎಂದರೆ ಅದು ತಪು. ಕೂಡಲೇ ಈ ಬಗ್ಗೆ ಪರಿಶೀಲಿಸುತ್ತೇನೆ.
| ಲಿಂಗರಾಜು, ಡಿಸಿಎಫ್, ಸಾಮಾಜಿಕ ಅರಣ್ಯ ವಿಭಾಗ ರಾಮನಗರ
ಸರ್.., ದಿನಕ್ಕೆ ಇಬ್ಬರು ಮೂವತ್ತು ಗುಂಡಿ ಅಗೆಯುತ್ತೇವೆ. ಮಣ್ಣಿನ ಹದದ ಮೇರೆಗೆ ಹಣ ನಿಗದಿ ಮಾಡುತ್ತೇವೆ. ಇಲ್ಲಿ ಗುಂಡಿಯೊಂದಕ್ಕೆ 120 ರೂ.ನಂತೆ ಕೆಲಸ ಮಾಡುತ್ತಿದ್ದೇವೆ. ಊಟ, ತಿಂಡಿ, ನೀರಿನ ವ್ಯವಸ್ಥೆ ಮಾಡಬೇಕು. ಜತೆಗೆ, ಸಸಿ ಹಾಗೂ ಕೋಲನ್ನು ಗುಂಡಿಯ ಸಮೀಪ ಅವರೇ ಕೊಡಬೇಕು.
| ಕೂಡ್ಲೂರು ರಸ್ತೆಯಲ್ಲಿ ಸಸಿ ನೆಡುತ್ತಿದ್ದ ಬಳ್ಳಾರಿ ಮೂಲದ ವಲಸೆ ಕಾರ್ಮಿಕ