ಕೋವಿಡ್ ಸಂಕಷ್ಟದಲ್ಲಿ ನರೇಗಾ ಆಸರೆ

narega new
Published on

ಉಡುಪಿ: ಕೋವಿಡ್ ಸಂಕಷ್ಟ ಸಂದರ್ಭ ಜಿಪಂ ಮೂಲಕ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸಲಾಗಿದ್ದು, 3046 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ 9.55 ಕೋಟಿ ರೂ. ಕೂಲಿ ಪಾವತಿಸಲಾಗಿದೆ. 2.03 ಕೋಟಿ ರೂ. ಸಾಮಗ್ರಿ ಖರೀದಿಗೆ ವೆಚ್ಚ ಮಾಡಲಾಗಿದೆ. ಒಟ್ಟು 10,632 ಕುಟುಂಬಗಳ 18,503 ಜನರು ಯೋಜನೆ ಲಾಭ ಪಡೆದಿದ್ದಾರೆ.

ಕರೊನಾ ಲಾಕ್‌ಡೌನ್‌ನಿಂದ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಹೆಚ್ಚಿನ ಯುವಕರು ಮನೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗದ ಜನರಿಗೆ ನರೇಗಾ ಯೋಜನೆ ಆಸರೆಯಾಗಿ ಪರಿಣಮಿಸಿದೆ. ವೈಯುಕ್ತಿಕ ಕಾಮಗಾರಿ ನಡೆಸಲೂ ಅವಕಾಶ ಕಲ್ಪಿಸಲಾಗಿದೆ.

103 ಕೆರೆ ಹೂಳೆತ್ತುವ, 152 ತೋಡು ಹೂಳೆತ್ತುವ, 982 ನೀರಾವರಿ ಬಾವಿ, 855 ಬಚ್ಚಲು ಗುಂಡಿ, 326 ದನದ ಕೊಟ್ಟಿಗೆ, 44 ಅಡಕೆ, ತೆಂಗು, ಮಲ್ಲಿಗೆ ಮುಂತಾದ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2021-22ನೇ ಸಾಲಿನಲ್ಲಿ ಹೊಸದಾಗಿ 3213 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಜೂನ್ ಅಂತ್ಯಕ್ಕೆ 51,481 ಮಾನವ ದಿನ ಸೃಜನೆಯ ಗುರಿ ನಿಗದಿಯಾಗಿದ್ದು, ಈಗಾಗಲೇ 65,853 ಮಾನವ ದಿನಗಳನ್ನು ಸೃಜಿಸಿ ಸಾಧನೆ ಮಾಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ 1.98 ಕೋಟಿ ರೂ. ಕೂಲಿ ವೆಚ್ಚ ಹಾಗೂ 11.46 ಲಕ್ಷ ರೂ. ಸಾಮಗ್ರಿ ವೆಚ್ಚ ಪಾವತಿಸಲಾಗಿದೆ. ಬೈಂದೂರಿನಲ್ಲಿ 31,751 ಮಾನವ ದಿನ ಗುರಿಯಲ್ಲಿ 34,190 ಮಾನವದಿನ ಸೃಜಿಸಲಾಗಿದೆ. 1.02 ಕೋಟಿ ರೂ. ಕೂಲಿ ವೆಚ್ಚ ಹಾಗೂ 19.36 ಲಕ್ಷ ರೂ.ಸಾಮಗ್ರಿ ವೆಚ್ಚ ಪಾವತಿಸಲಾಗಿದೆ. ಹೆಬ್ರಿಯಲ್ಲಿ 15,997 ಮಾನವ ದಿನಗಳಲ್ಲಿ 14,584 ದಿನಗಳ ಕೆಲಸ ಮಾಡಲಾಗಿದೆ. 44.84 ಲಕ್ಷ ರೂ. ಕೂಲಿ ವೆಚ್ಚ ಹಾಗೂ 15.51 ಲಕ್ಷ ರೂ. ಸಾಮಗ್ರಿ ವೆಚ್ಚ ಪಾವತಿಸಲಾಗಿದೆ. ಕಾಪು ತಾಲೂಕಿನಲ್ಲಿ 19,709 ಮಾನವ ದಿನ ಸೃಜನೆಯ ಗುರಿಯಲ್ಲಿ 30,849 ಮಾನವದಿನಗಳನ್ನು ಸೃಜಿಸಲಾಗಿದೆ. ಲಾಕ್‌ಡೌನ್‌ಅವಧಿಯಲ್ಲಿ 92.88 ಲಕ್ಷ ರೂ. ಕೂಲಿ ವೆಚ್ಚ ಹಾಗೂ 24.07 ಲಕ್ಷ ರೂ.ಸಾಮಗ್ರಿ ವೆಚ್ಚ ಮಾಡಲಾಗಿದೆ. ಕಾರ್ಕಳ ತಾಲೂಕಿನಲ್ಲಿ 40,213 ಮಾನವ ದಿನ ಸೃಜನೆಯ ಗುರಿಯಲ್ಲಿ 30,724 ದಿನಗಳನ್ನು ಸೃಜಿಸಲಾಗಿದೆ. 90.15 ಲಕ್ಷ ರೂ. ಕೂಲಿ ವೆಚ್ಚ ಹಾಗೂ 42.91 ಲಕ್ಷ ರೂ.ಸಾಮಗ್ರಿ ವೆಚ್ಚ ಮಾಡಲಾಗಿದೆ. ಕುಂದಾಪುರದಲ್ಲಿ 1,15,424 ಮಾನವ ದಿನ ಸೃಜನೆ ಗುರಿಯಲ್ಲಿ 1,23,811ದಿನಗಳನ್ನು ಸೃಜಿಸಲಾಗಿದೆ. 3.69 ಕೋಟಿ ರೂ. ಕೂಲಿ ವೆಚ್ಚ ಹಾಗೂ 74.89 ಲಕ್ಷ ರೂ.ಸಾಮಗ್ರಿ ವೆಚ್ಚ ಮಾಡಲಾಗಿದೆ. ಉಡುಪಿಯಲ್ಲಿ 21,498 ಮಾನವ ದಿನ ಸೃಜನೆಯ ಗುರಿ ಇದ್ದು , 19,613 ಮಾನವ ದಿನಗಳನ್ನು ಸೃಜಿಸಲಾಗಿದೆ. 57.89 ಲಕ್ಷ ರೂ. ಕೂಲಿ ವೆಚ್ಚ ಹಾಗೂ 19.58 ಲಕ್ಷ ರೂ.ಸಾಮಗ್ರಿ ವೆಚ್ಚ ಮಾಡಲಾಗಿದೆ.

2021-22 ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಗುರಿ ಮೀರಿ ಪ್ರಗತಿ ಸಾಧಿಸಿದೆ. ಈ ಆರ್ಥಿಕ ವರ್ಷದಲ್ಲಿ ಒಟ್ಟು 6.70 ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿದೆ. ಜೂನ್ ಅಂತ್ಯಕ್ಕೆ 2.96 ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಲಾಗಿತ್ತು. ಈಗಾಗಲೇ 3.26 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ. 107.95 ರಷ್ಟು ಸಾಧನೆ ಮಾಡಲಾಗಿದೆ. ಯೋಜನೆಯಡಿ ಶೇ.63.20 ರಷ್ಟು ಮಹಿಳೆಯರುಭಾಗವಹಿಸಿದ್ದು, ರಾಜ್ಯದಲ್ಲಿ ಗರಿಷ್ಠ ಪ್ರಮಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಾ. ನವೀನ್ ಭಟ್, ಸಿಇಓ, ಜಿಪಂ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net