

ಮಂಡ್ಯ: ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ಜೀವನಾಡಿಯಾಗಿದ್ದು, ಅವರ ಆರ್ಥಿಕ ಪ್ರಗತಿಗೆ ಮೆಟ್ಟಿಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಆನಂದ್‌ಕುಮಾರ್ ಹೇಳಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನರೇಗಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಮೊತ್ತ 2.5 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಳವಾಗಿದೆ. ಯೋಜನೆಯ ಅನುಕೂಲತೆಯನ್ನ ಮತ್ತಷ್ಟು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿಯ ಮಹತ್ತರವಾದ ಯೋಜನೆಗಳಲ್ಲಿ ನರೇಗಾ ಒಂದು. ಗ್ರಾಮೀಣ ಪ್ರದೇಶದ ದುಡಿಯುವ ಕುಟುಂಬಕ್ಕೆ 100 ದಿನಗಳ ಕೆಲಸ ನೀಡುವುದು ಯೋಜನೆಯ ಉದ್ದೇಶ. ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಕೋಳಿ, ಹಂದಿ, ಕುರಿ/ಮೇಕೆ ಶೆಡ್ಡು ಸೇರಿದಂತೆ ಇತರೆ ಕಾಮಗಾರಿಗಳನ್ನು ಒಳಗೊಂಡಂತೆ ಹಲವು ಕಾರ್ಯಕ್ರಮಗಳಿವೆ. ಜಲಸಂಪನ್ಮೂಲಗಳ ಕಾಮಗಾರಿಗಳಿಗೆ ಸಂಬಂಧಿಸಿದ ಕೆರೆ, ಕಾಲುವೆ, ಕಲ್ಯಾಣಿ ಸೇರಿದಂತೆ ರಸ್ತೆ, ಚರಂಡಿ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಕಾಮಗಾರಿಗಳಾದ ಶಾಲಾ ಕಾಂಪೌಂಡ್, ಆಟದ ಮೈದಾನ, ಅಡುಗೆ ಕೋಣೆ, ಅಂಗನವಾಡಿ ಕಟ್ಟಡಗಳನ್ನು ನರೇಗಾ ಯೋಜನೆಯಡಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಮೋಹನ್‌ಕುಮಾರ್ ಮಾತನಾಡಿ, ನರೇಗಾ ಯೋಜನೆಯ ಧ್ಯೇಯೋದ್ದೇಶಗಳ ಸಾಕಾರದಲ್ಲಿ ಭಾಗಿದಾರರಾದ ಎಲ್ಲರ ಶ್ರಮ ಸಾಧನೆ ಹೀಗೆ ಮುಂದುವರಿಯಲಿ. ಈ ಸಾಧನೆ ಇತರೆ ಕೂಲಿಕಾರರಿಗೂ ಸ್ಪೂರ್ತಿಯಾಗಿ ನರೇಗಾ ಯೋಜನೆಗೆ ಮತ್ತಷ್ಟು ಶಕ್ತಿ ತುಂಬುವಂತಾಗಲಿ ಎಂದು ಆಶಯ ನುಡಿಯನ್ನಾಡಿದರು.
ತಾಲೂಕು ಪಂಚಾಯಿತಿ ಇಒಗಳಾದ ಬಿ.ಎಸ್.ಸತೀಶ್, ವೇಣು, ವೀಣಾ, ಮಮತಾ, ಸಹಾಯಕ ನಿರ್ದೇಶಕರಾದ(ಗ್ರಾಉ)ಸುರೇಂದ್ರ, ಮಲ್ಲೇಶ್, ಜಿಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಕೆಂಪೇಗೌಡ, ಸುಚಿತ್ರಾ, ಎಡಿಪಿಸಿ ಮುನಿರಾಜು, ಡಿಎಂಐಎಸ್ ರಶ್ಮಿ, ಶಿಲ್ಪಾ, ಐಇಸಿ ಸಂಯೋಜಕರಾದ ಶಿವರಂಜನ್, ಸುನೀಲ್, ಆಶಾ, ಆನಂದ್, ಸುಮಾ, ಕುಸುಮ ಇದ್ದರು.
ಇದೇ ವೇಳೆ 100 ಮಾನವ ದಿನ ಪೂರೈಸಿರುವ ಫಲಾನುಭವಿಗಳಿಗೆ ಅಭಿನಂದನಾ ಪತ್ರ ಹಾಗೂ ಕೂಸಿನಮನೆ ಕೇರ್ ಟೇಕರ್‌ಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಲಾಯಿತು.