ನರೇಗಾದಲ್ಲಿ ತೆಂಗಿನ ತೋಟಗಳ ಪುನಃಶ್ಚೇತನ

coconut
Published on

ಉಡುಪಿ: ಜಿಲ್ಲೆಯಲ್ಲಿ ತೆಂಗು ಕೃಷಿ ಪ್ರಧಾನವಾಗಿದ್ದು, ಅತೀ ಸಣ್ಣ ಕೃಷಿಕರೇ ಹೆಚ್ಚಾಗಿದ್ದಾರೆ. ಹೀಗಾಗಿ ಈ ವರ್ಷ ರೈತರಿಗೆ ತೆಂಗಿನ ತೋಟಗಳಲ್ಲಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೆಂಗಿನ ತೋಟಗಳ ಪುನಃಶ್ಚೇತನ ಕಾರ್ಯಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.

ನರೇಗಾದಲ್ಲಿ ತೆಂಗು ನಾಟಿ ಮಾಡಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾಮಗಾರಿ ನಡೆಸಬಹುದು. ಜತೆಗೆ ಹಳೇ ತೆಂಗಿನ ತಾಕಿನ ಪುನಃಶ್ಚೇತನ ಮಾಡಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾಮಗಾರಿಗೂ ಅವಕಾಶ ಕಲ್ಪಿಸಲಾಗಿದೆ.

ಬೇಡಿಕೆ ಪ್ರಕಾರ ಆಯಾ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಪ್ರತೀ ರೈತ ಕುಟುಂಬಕ್ಕೆ ಒಂದು ನೂರು ಮಾನವ ದಿನಗಳಿಗಿಂತ ಕಡಿಮೆ ಇಲ್ಲದಂತೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಉದ್ಯೋಗ ಚೀಟಿ ಹೊಂದಿರುವ ಹಾಗೂ ಹೊಸದಾಗಿ ಉದ್ಯೋಗ ಚೀಟಿ ಪಡೆಯಲು ಅರ್ಹರಿರುವ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಗ್ರಾಪಂ ಹಾಗೂ ತೋಟಗಾರಿಕೆ ಇಲಾಖೆಯ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.

ಏನೆಲ್ಲಾ ಕಾಮಗಾರಿ?

ಒಣಗಿದ ಅಥವಾ ಸತ್ತಿರುವ ತೆಂಗಿನ ಮರಗಳನ್ನು ಬುಡ ಸಮೇತ ತೆಗೆದು ಹಾಕಿ ಹೊಸದಾಗಿ ತಳಿಗಳ ನಾಟಿ ಮಾಡಬಹುದು. ಕಡಿಮೆ ಇಳುವರಿ ಹೊಂದಿರುವ ತೆಂಗಿನ ಮರಗಳಿಗೆ ಗೊಬ್ಬರ ನೀಡುವುದು, ಹಳೇ ತೆಂಗಿನ ಮರಗಳ ಪುನಃಶ್ಚೇತನಕ್ಕೂ ಅವಕಾಶವಿದೆ.

ಯೋಜನೆ ವಿವರ

2021-22 ನೇ ಸಾಲಿನಲ್ಲಿ ನರೇಗಾದಲ್ಲಿ ದಿನಕ್ಕೆ 289 ರೂ. ಕೂಲಿ ನೀಡಬಹುದಾಗಿದ್ದು, ಒಂದುನೂರು ದಿನಗಳಿಗೆ ಗರಿಷ್ಠ ರೂ. 28,900 ಮೊತ್ತದ ಅಕುಶಲ ಕೂಲಿಯನ್ನು ಪಡೆಯಬಹುದು. ಕಾಮಗಾರಿ ನಿರ್ವಹಿಸಿದ 8ರಿಂದ 15 ದಿನಗಳೊಳಗಾಗಿ ರೈತರಿಗೆ ಹಣ ಲಭಿಸುತ್ತದೆ. ಸಾಮಗ್ರಿ ವೆಚ್ಚಗಳಿಗೆ ಸಂಬಂಧಿಸಿದಂತೆ ರೈತರು ನಿಗಧಿತ ಬಿಲ್ಲುಗಳನ್ನು ಸಿದ್ದಪಡಿಸಿ ತೋಟಗಾರಿಕೆ ಇಲಾಖೆಯ ಕಚೇರಿಗೆ ನೀಡಬೇಕಾಗಿದೆ.

24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಹೆಚ್ಚಿನ ಭಾಗಗಳಲ್ಲಿ ಹಳೇ ತೋಟವಿದೆ. ಹೀಗಾಗಿ ಪುನಶ್ಚೇತನ ಯೋಜನೆ ಹಮ್ಮಿಕೊಂಡು ಇಳುವರಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಕನಿಷ್ಠ ಅರ್ಧ ಎಕರೆ ಪ್ರದೇಶದಲ್ಲಿ ತೆಂಗುಬೆಳೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಭುವನೇಶ್ವರಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net