

ಕೋಲಾರ: ನರೇಗಾ ಯೋಜನೆಯ ನೆರವು ಪಡೆದ ಲಾರಿ ಚಾಲಕರೊಬ್ಬರು ಗುಲಾಬಿ ಹೂವು ಬೆಳೆದು ಕೈತುಂಬ ಆದಾಯಗಳಿಸಿ ಹೊಸ ಬದುಕು ರೂಪಿಸಿಕೊಂಡಿದ್ದಾನೆ.
ಕೋಲಾರ ತಾಲೂಕು ಅರಾಭಿಕೊತ್ತನೂರು ಗ್ರಾಮಪಂಚಾಯತಿಯ ಚಿಕ್ಕಅಯ್ಯೂರು ಗ್ರಾಮದ ಸತೀಶ್ ಎಂಬುವರು, ಉದ್ಯೋಗ ಖಾತ್ರಿಯಲ್ಲಿ, ಗುಲಾಬಿ ಹೂವು ಬೆಳೆದ ಲಾರಿ ಚಾಲಕ.
ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ 30 ಗುಂಟೆ ಜಮೀನಿನಲ್ಲಿ ನೀಲಗಿರಿ ಹಾಕಿದ್ದರು. ಆದರೆ ಅದರಿಂದ ಹೆಚ್ಚು ಪ್ರಯೋಜನವೇನೂ ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ. ಸ್ವ&ಉದ್ಯೋಗ ಮಾಡುವ ನಿಟ್ಟಿನಲ್ಲಿ, ಜಮೀನಿನಲ್ಲಿದ್ದ ನೀಲಗಿರಿ ನಾಶಗೊಳಿಸಿ, ಪಕ್ಕದ ಜಮೀನಿನಿಂದ ನೀರು ಪಡೆದು ಕೃಷಿ ಮಾಡಲು ಮುಂದಾದರು.
ಆದರೆ ಯಾವ ಬೆಳೆಯನ್ನು ಬೆಳೆಯಬೇಕು, ಎಂಬ ಯೋಚನೆಗೆ ಬಿದ್ದ ಸತೀಶ್ಗೆ ಸಾರ್ವಕಾಲಿಕ ಲಾಭದ ಬೆಳೆಯಾಗಿ ಕಂಡಿದ್ದು ಗುಲಾಬಿ. ಅಲ್ಲದೆ ಗುಲಾಬಿ ಬೆಳೆಯಲು ನರೇಗಾದಡಿ ನೆರವು ನೀಡುವ ಮಾಹಿತಿ ಪಡೆದು, ಅದನ್ನು ಸದ್ಬಳಸಿಕೊಂಡಿದ್ದು, ವಿಶೇಷ.
ಸತೀಶ್ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೂ ಬೆಳೆಯುವ ಬಗ್ಗೆ ತಿಳಿದುಕೊಂಡರು. ತಮಿಳುನಾಡಿನ ಅಗಲಕೋಟೆಯಿಂದ 1,300 ಮೆರಾಬುಲ್ ಕೆಂಪುತಳಿಯ ಗುಲಾಬಿ ಗಿಡ ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಸಿಕೊಂಡಿದ್ದು, ಸತೀಶ್ ಕುಟುಂಬದವರೇ ಗುಲಾಬಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ನರೇಗಾದಿಂದ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ 72,512 ರೂ. ನೆರವು ಪಡೆದುಕೊಂಡಿರುವುದಾಗಿ ಸತೀಶ್ ತಿಳಿಸಿದ್ದಾರೆ.
ಇತರರಿಗೆ ಮಾದರಿ
ಲಾರಿ ಚಾಲಕನ ಕೃಷಿ ಪಯಣಕ್ಕೆ ಮಹಾತ್ಮಗಾಂಧಿ ನರೇಗಾ ನೆರವಾಗಿದ್ದು, ಸ್ವಗ್ರಾಮದಲ್ಲಿ ಉತ್ತಮ ಆದಾಯ ಗಳಿಸುತ್ತಿರುವ ಸತೀಶ್ ಈಗ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ. ಸತೀಶ್ನನ್ನು ಅನುಸರಿಸಿ, ಈಗ ಗ್ರಾಮದಲ್ಲಿ ಅನೇಕ ರೈತರು ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ತಿಂಗಳಿಗೆ 40-50 ಸಾವಿರ ಗಳಿಕೆ
ಸಾರ್ವಕಾಲಕ್ಕೂ ಗುಲಾಬಿ ಹೂವಿಗೆ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ದಿನಬಿಟ್ಟು ದಿನ ಕೊಯ್ಲು ಮಾಡುತ್ತಿದ್ದು, 80 ರಿಂದ 100ಕೆಜಿ ಹೂವು ದೊರೆಯುತ್ತದೆ. ಗುಲಾಬಿಗೆ ಸಾಮಾನ್ಯ ದಿನಗಳಲ್ಲಿ 60 ರಿಂದ 100 ರೂ. ಪಾಯಿ ಇದ್ದರೆ, ಹಬ್ಬದ ದಿನಗಳಲ್ಲಿ 150 ರಿಂದ 200 ರೂ. ಮಾರಾಟವಾಗುತ್ತದೆ. ಇದರಿಂದ ರೈತ ಸತೀಶ್ ತಿಂಗಳಿಗೆ ಸರಾಸರಿ 40 ರಿಂದ 50 ಸಾವಿರ ಆದಾಯ ಗಳಿಸುತ್ತಿರುವುದಾಗಿ ಸತೀಶ್ ಮಾಹಿತಿ ನೀಡಿದ್ದಾರೆ.
"ಲಾರಿ ಚಾಲಕನಾಗಿದ್ದ ನಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಉತ್ತಮ ಆದಾಯಗಳಿಸುತ್ತಿದ್ದೇನೆ. ಗುಲಾಬಿ ಹೂವಿಗೆ ಸದಾ ಬೇಡಿಕೆ ಇದೆ. ನಷ್ಟ ಆಗೋದಿಲ್ಲ. ತೋಟವನ್ನ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಉತ್ತಮ ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ಬಡ ರೈತರಿಗೆ ತುಂಬ ಉಪಯುಕ್ತವಾಗಿದ್ದು, ಅದನ್ನ ಸದ್ಬಳಕೆ ಮಾಡಿಕೊಳ್ಳಬೇಕು."
- ಸತೀಶ್, ಗುಲಾಬಿ ಬೆಳೆಗಾರ, ಚಿಕ್ಕಅಯ್ಯೂರು
"ಸತೀಶ್ ಲಾರಿ ಚಾಲಕನಾಗಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನನ್ನ ಬಳಿ ಮಾಹಿತಿ ನೀಡಿದ ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಕೂಲಿ ಮತ್ತು ಸಾಮಗ್ರಿಗಳ ಖರೀದಿಗೆ ಹಣ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಂಡು ಚಾಲಕನ ವೃತ್ತಿ ಬಿಟ್ಟು ಮತ್ತು ಗುಲಾಬಿ ಹೂವು ಬೆಳೆದ ಸತೀಶ್ ಪ್ರಗತಿಪರ ರೈತನಾಗಿದ್ದು, ಲಾಭವೂ ಗಳಿಸುತ್ತಿದ್ದಾನೆ."
- ಸಿ.ಆನಂದ್, ನರೇಗಾ ಸಂಯೋಜಕರು, ಕೋಲಾರ.