ನರೇಗಾದಲ್ಲಿ ದೊಡ್ಡಸಾಗ್ಗೆರೆ ಶಾಲೆ ಮೈದಾನ ಅಭಿವೃದ್ಧಿ ; ಗ್ರಾಪಂನಿಂದ 3ಲಕ್ಷ ರೂ. ಅನುದಾನ ; ಕ್ರೀಡಾ ಚಟುವಟಿಕೆಗೆ ಚಾಲನೆ

18TMK_Doddasaggere_SL1
Published on

ತುಮಕೂರು : ಕೊರಟಗೆರೆ ತಾಲೂಕು ದೊಡ್ಡಸಾಗ್ಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮನರೇಗಾ ಯೋಜನೆಯಡಿ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿದೆ. 1930ರಲ್ಲಿ ಶಾಲೆ ಆರಂಭಿಸಿದ್ದು, ಶತಮಾನೋತ್ಸವದತ್ತ ಸಾಗುತ್ತಿರುವ ಈ ಶಾಲೆಯಲ್ಲಿ ಸದ್ಯ 300 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಗೆ ಸ್ವಂತ ನಿವೇಶನವಿದ್ದರೂ ಅಲ್ಲಿ ಗಿಡಗಳು ಬೆಳೆದಿದ್ದು, ಮೈದಾನ ಇಲ್ಲದಂತಾಗಿತ್ತು. ಇದೀಗ ನರೇಗಾ ನೆರವಿನಿಂದ ಸಾಕಾರಗೊಂಡಿದೆ.

ಶಾಲೆ ಮುಖ್ಯಶಿಕ್ಷಕ ರಂಗ ಅರಸಯ್ಯ ಅವರು ಆಟದ ಮೈದಾನದ ಸಮಸ್ಯೆ ಬಗ್ಗೆ ಗ್ರಾಪಂ ಗಮನಕ್ಕೆ ತಂದಾಗ 3ಲಕ್ಷ ರೂ. ವೆಚ್ಚದಲ್ಲಿ ಸುಮಾರು 150 ಮೀ. ರನ್ನಿಂಗ್ ಟ್ರ್ಯಾಕ್, ಖೋ-ಖೋ ಮೈದಾನ, ವಾಲಿಬಾಲ್ ಗ್ರೌಂಡ್ ಹಾಗೂ ಕಬಡ್ಡಿ ಮೈದಾನವಿರುವ ಸುಂದರ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿದೆ. ದೊಡ್ಡಸಾಗ್ಗೆರೆ ತುಮಕೂರು ಜಿಲ್ಲೆಯ ಗಡಿ ಭಾಗದಲ್ಲಿರುವುದರಿಂದ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೂರಾರು ಮಕ್ಕಳಿಗೆ ಇದರ ಉಪಯೋಗವಾಗಲಿದೆ, ಸುತ್ತಮುತ್ತಲಿನ 30 ಹಳ್ಳಿಗಳ ಮಕ್ಕಳು ಈ ಆಟದ ಮೈದಾನದ ಪ್ರಯೋಜನ ಪಡೆಯುತ್ತಿದ್ದಾರೆ.

ಬ್ಯಾಸ್ಕೆಟ್ ಬಾಲ್‌ಗೂ ಅವಕಾಶವಿರಲಿ ; ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡಿರುವ ನೂತನ ಬೃಹತ್ ಆಟದ ಮೈದಾನ ಗಮನ ಸೆಳೆಯುತ್ತಿದೆ. ಆಟದ ಮೈದಾನದಲ್ಲಿ ನಿರ್ಮಿಸಿರುವ ರನ್ನಿಂಗ್ ಟ್ರ್ಯಾಕ್, ಖೋಖೋ ಗ್ರೌಂಡ್, ವಾಲಿಬಾಲ್ ಕೋರ್ಟ್ ಹಾಗೂ ಕಬಡ್ಡಿ ಕೋರ್ಟ್‌ನೊಂದಿಗೆ ಬ್ಯಾಸ್ಕೆಟ್ ಬಾಲ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಸಲು ಅವಕಾಶ ಕಲ್ಪಿಸಿಕೊಟ್ಟರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಉಪಯುಕ್ತವಾಗಲಿದೆ ಎಂಬ ಅಭಿಪ್ರಾಯವಿದೆ.

ದೊಡ್ಡಸಾಗ್ಗೆರೆ ಗಡಿ ಗ್ರಾಮವಾಗಿದ್ದು, ಇಲ್ಲಿನ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕೆಂಬ ಆಸೆಯಿದೆ, ಗ್ರಾಮದ ನೂರಾರು ಮಕ್ಕಳಿಗೆ ಆಟದ ಮೈದಾನ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು. ಸಿ.ಆರ್.ಉಮೇಶ್ ದೊಡ್ಡಸಾಗ್ಗರೆ ಪಿಡಿಒ ದೊಡ್ಡಸಾಗ್ಗೆರೆಗೆ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರದಿಂದ ಉತ್ತಮ ಬಸ್ ಸೌಲಭ್ಯವಿದೆ. ಸಾವಿರಾರು ಮಕ್ಕಳು ಆಟದ ಮೈದಾನ ಬಳಸಿಕೊಳ್ಳುವ ಮೂಲಕ ಕ್ರೀಡಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಹೋಬಳಿ ಮಟ್ಟದಲ್ಲಿಯೇ ಉತ್ತಮ ಹಾಗೂ ವಿಶಾಲ ಮೈದಾನ ಹೊಂದಿರುವ ಈ ಶಾಲೆಯ ಬಗ್ಗೆ ಹೆಮ್ಮೆಯಿದೆ. ರಾಕೇಶ್, ದೈಹಿಕ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net