

ಬೆಂಗಳೂರು: ವಿಶ್ವದ ಅತಿ ದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ (2025) ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಿಳಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಇದರನ್ವಯ ಕರ್ನಾಟಕ ದಕ್ಷಿಣ ಪ್ರಾಂತದ ವಿವಿಧ ಸ್ಥಳಗಳಲ್ಲಿ ಡಿಸೆಂಬರ್ ತಿಂಗಳಾಂತ್ಯದೊಳಗೆ ‘ಜಾಗೃತ ಮಹಿಳಾ ಸಮ್ಮೇಳನ’ಗಳನ್ನು ಸಂಘಟಿಸಲಾಗಿದೆ.
ಇದೇ ತಿಂಗಳ 26ರಂದು ರಾಜಧಾನಿಯ ಎರಡು ಕಡೆಗಳಲ್ಲಿ ಮಹಿಳಾ ಸಮ್ಮೇಳನ ನಡೆಯಲಿದೆ. ಬೆಂಗಳೂರು ದಕ್ಷಿಣ ಸಮ್ಮೇಳನವು ಸಮರ್ಥ ಭಾರತ ವೇದಿಕೆಯಡಿ ಹಾಗೂ ಬೆಂಗಳೂರು ಉತ್ತರ ಸಮಾವೇಶ ಯಾದವ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಸಮ್ಮೇಳನದ ಅಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಸಮಾಜದ ಬಗ್ಗೆ ಕಳಕಳಿಯಿರುವ ಮಹಿಳೆಯರ ಏಕತ್ರೀಕರಣ, ವಿವಿಧ ವೃತ್ತಿಯಲ್ಲಿರುವ ಮಹಿಳಾ ಸಮಾಜಮುಖಿ ದೃಷ್ಟಿ ನೀಡುವುದು ಹಾಗೂ ತಮ್ಮ ಆಸಕ್ತ ಕ್ಷೇತ್ರದಲ್ಲಿ ಸಮಾಜಸೇವೆಯ ಅವಕಾಶವನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶವು ಬಸವನಗುಡಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಮಾಜಿಕ, ಆರ್ಥಿಕ, ನಾಗರಿಕ, ಪರಿಸರ ಹಾಗೂ ಇತರ ಸವಾಲುಗಳನ್ನು ಎದುರಿಸುವ ಗುರಿ ಹೊಂದಿರುವ ಸಮರ್ಥ ಭಾರತ ವೇದಿಕೆಯ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಸಮಾವೇಶದಲ್ಲಿ 2,000 ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜತೆಗೆ ಭಾರತದ ಮಹಿಳಾ ಸಾಧಕಿಯರ ಪರಿಚಯಾತ್ಮಕ ಪ್ರದರ್ಶಿನಿ, ಸಾಹಿತ್ಯ ಮಳಿಗೆ, ವನವಾಸಿ, ಗೋ ಉತ್ಪನ್ನ ಹಾಗೂ ಸ್ವದೇಶಿ ಮಳಿಗೆಗಳೂ ಇರಲಿವೆ ಎಂದು ತಿಳಿಸಿದರು.
ಹೆಗಡೆನಗರದಲ್ಲಿ ಕಾರ್ಯಕ್ರಮ:
ಬೆಂಗಳೂರು ಉತ್ತರ ಸಮ್ಮೇಳನವು ಥಣಿಸಂದ್ರ ಮುಖ್ಯರಸ್ತೆಯ ಹೆಗಡೆನಗರದ ಇಬಿಸು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಸುಶೀಲಮ್ಮ, ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು, ನೆಲಮಂಗಲದ ಸಿದ್ಧಾರೂಢ ಆಶ್ರಮದ ಮಾತಾಜಿ ಉಮಾ ಭಾರತಿ, ಕರ್ನಾಟಕ ಮುಕ್ತ ವಿವಿ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.