

ಮೈಸೂರು: ಮನೆ, ಮನೆ ಮಾದೇಗೌಡರು ಎಂದೇ ಹೆಸರಾಗಿರುವ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅವರಿಗೆ ನರೆಡ್ಕೊ ಮೈಸೂರು ಚಾಪ್ಟರ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಶನಿವಾರ ಆತ್ಮೀಯವಾಗಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಡಿ.ಮಾದೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದಾಗ ಆಡಳಿತ ವರ್ಗ ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣ ಆರೋಗ್ಯ, ಆಹಾರ, ಬಟ್ಟೆ, ಸೂರು ಸೇರಿ 5 ಮುಖ್ಯ ಅಗತ್ಯತೆಯನ್ನು ನೆರವೇರಿಸುವ ಗುರಿ ಹೊಂದಲಾಗಿತ್ತು. ಅದನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು. ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬರಿಗೂ ಮನೆ ಕೊಡಲು ಅಗತ್ಯವಾದ ಸೌಲಭ್ಯವಿದೆ. ಹಾಗಾಗಿ ಈ ನಿಟ್ಟಿನಲ್ಲಿ ನರೆಡ್ಕೊದಂತ ಸಂಘಟನೆಗಳು ಸರ್ಕಾರಕ್ಕೆ ದಿಕ್ಸೂಚಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಗತ್ಯವಿರುವ ಜನಸಾಮನ್ಯರಿಗೆ ಮನೆ ದೊರಕಿಸಿಕೊಡುವ ನಿಟ್ಟಿನಲ್ಲಿ ನರೆಡ್ಕೊ ಕೆಲಸ ಮಾಡಬೇಕು. ಅಲ್ಲದೇ ಇಂತಿಷ್ಟು ದಿನದಲ್ಲಿ ಎಲ್ಲರಿಗೂ ಸೂರು ಕೊಡುತ್ತೇವೆ ಎಂದು ಸರ್ಕಾರಕ್ಕೆ ಗುರಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ನರೆಡ್ಕೊ ರಾಷ್ಟ್ರೀಯ ಅಧ್ಯಕ್ಷ ಜಿ. ಹರಿಬಾಬು ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ಎದುರಿಸುತಗತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವುದೇ ನಮ್ಮ ಸಂಘಟನೆಯ ಮುಖ್ಯ ಗುರಿಯಾಗಿದೆ. ಅಲ್ಲದೇ ಸದಸ್ಯರಿಂದ ಕಲಿಯುವುದು, ತಜ್ಞರಿಂದ ಉದ್ಯಮಕ್ಕೆ ಬೇಕಾದ ಜ್ಞಾನವನ್ನು ಕಲಿಯುವುದಕ್ಕೆ ಬೇಕಾದ ವೇದಿಕೆ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ಜಿಎಸ್‌ಟಿ ಸೇರಿದಂತೆ ನಾನಾ ರಿಯಾಯಿತಿಗಳನ್ನು ಕ್ಷೇತ್ರಕ್ಕೆ ಕೊಡಿಸುವುದು, ರೇರಾ ಕಾಯಿದೆಯಲ್ಲಿನ ಲೋಪದೋಷಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು, ಭೂಮಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿ ಗೋಪಾಲ್ ರಾಜು, ಜಿಎಸ್‌ಎಸ್ ಸಂಸ್ಥೆ ಡಿ. ಶ್ರೀಹರಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನರೆಡ್ಕೊ ಕರ್ನಾಟಕ ಉಪಾಧ್ಯಕ್ಷ ಮನೋಜ್ ಲೋದ, ನರೆಡ್ಕೊ ಮೈಸೂರು ಛೇರ್ಮನ್ ಆದಿಶೇಷನ್‌ಗೌಡ, ಕಾರ್ಯದರ್ಶಿ ಜಿ.ಕೆ.ಸುಧೀಂದ್ರ, ಉಪಾಧ್ಯಕ್ಷ ಎಂ.ಡಿ. ರಾಘವೇಂದ್ರಪ್ರಸಾದ್, ಖಜಾಂಚಿ ಎ.ಪಿ.ನಾಗೇಶ್, ಸಹ ಕಾರ್ಯದರ್ಶಿ ಗಗನ್ ದೀಪ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ದಿವ್ಯೇಶ್ ಇತರರು ಇದ್ದರು.
ಎಪಿಎನ್ ಪ್ರಾಪರ್ಟಿಸ್‌ಗೆ ಪ್ರಶಸ್ತಿ :
ಮುಡಾ ಉತ್ತಮ ವಸತಿ ಬಡಾವಣೆ ಪ್ರಶಸ್ತಿಯನ್ನು ಎಪಿಎನ್ ಪ್ರಾಪರ್ಟಿಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಎಪಿಎನ್ ಹಿಲ್ ವ್ಯೆವ್ ಬಡಾವಣೆಗೆ ನೀಡಲಾಯಿತು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ನರೆಡ್ಕೊ ರಾಷ್ಟ್ರೀಯ ಅಧ್ಯಕ್ಷ ಜಿ. ಹರಿಬಾಬು ಅವರು ಎಪಿಎನ್ ಪ್ರಾಪರ್ಟಿಸ್ ನ ಪಾಲುದಾರ ಎ.ಪಿ. ನಾಗೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಅಲ್ಲದೇ ರಿಯಲ್ ಎಸ್ಟೇಟ್ ಉದ್ಯಮದ ನಾನಾ ಭಾಗಗಳಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿರುವ 38 ಜನರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನರೆಡ್ಕೊಗೆ ಸೇರ್ಪಡೆಗೊಂಡ 20 ಮಂದಿ ಹೊಸ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಹಿಳಾ ಉದ್ಯಮಿ ಆಶಾ ದಿವ್ಯೇಶ್, ಮಹಿಳಾ ಚಾಪ್ಟರ್(ನರೆಡ್ಕೊ ನಾರಿ) ಉದ್ಘಾಟಿಸಿದರು.