ವಿದ್ಯಾರ್ಥಿಗಳಿಂದ ದುಶ್ಚಟದ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

Narco Coordination District Level Committee Meeting Mandya
Published on

ಮಂಡ್ಯ: ಪಾಲಕರ ವ್ಯಸನದಿಂದಾಗುತ್ತಿರುವ ದುಷ್ಪರಿಣಾಮ ಕುರಿತು ಅವರ ಮಕ್ಕಳಿಂದ ಜಾಗೃತಿ ಮೂಡಿಸಲು ಪತ್ರ ಬರೆಸುವ ಕಾರ್ಯಕ್ರಮ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾರ್ಕೋ ಸಮನ್ವಯ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳು ಪತ್ರ ಬರೆಸುವ ಯೋಜನೆ ರೂಪಿಸಿ. ಇದು ಪ್ರತಿ ಗ್ರಾಮ ಪಂಚಾಯಿತಿ ಮತ್ತು ಶಾಲಾ ಮಟ್ಟದಲ್ಲಿ ಆಯೋಜಿಸಿ. ಇದಲ್ಲದೆ ಬೀದಿ ನಾಟಕ ಹಾಗೂ ಜಾಥಾಗಳನ್ನು ಹೆಚ್ಚು ಆಯೋಜಿಸುವಂತೆ ಸೂಚಿಸಿದರು.

ಶಾಲೆಯ ಸುತ್ತಲಿನ 100 ಮೀಟರ್ ಅಂತರದಲ್ಲಿ ಯಾವುದೇ ಮಾದಕ ವಸ್ತು ಮತ್ತು ತಂಬಾಕು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ. ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ. ಎಲ್ಲಾ ಶಾಲೆಗಳಲ್ಲೂ ತಂಬಾಕು ನಿಯಂತ್ರಣ ವಿಷಯದ ಕುರಿತು ಭಿತ್ತಿಚಿತ್ರ ಅಂಟಿಸಿ ಅರಿವು ಮೂಡಿಸಿ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಗಾಂಜಾ ಗಿಡ ಬೆಳೆದು ಮಾರಾಟ ಮಾಡದಂತೆ ನಿಗಾವಹಿಸಿ. ಅಬಕಾರಿ ಇಲಾಖೆಯವರು ಮಾದಕ ವಸ್ತುಗಳ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮಾತ್ರೆಗಳನ್ನು ನೀಡದಂತೆ ಸೂಚನೆ ನೀಡಬೇಕು. ಈ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹೊರ ಜಿಲ್ಲೆಗಳಿಂದ ಗಾಂಜಾ ರಫ್ತು ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಪ್ರಕರಣ ದಾಖಲಾಗಿದ್ದು, ಅವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರೈಲುಗಳು ಮುಖಾಂತರ ಹೆಚ್ಚು ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ರೈಲ್ವೆ ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ತಡೆಗಟ್ಟಿ. ಅಗತ್ಯವಿದ್ದಲ್ಲಿ ಜಿಲ್ಲಾ ಶ್ವಾನದಳ ಬಳಸಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್, ಕೃಷಿ ಇಲಾಖೆ ಅಧಿಕಾರಿ ಮಾಲತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net