

ಮಂಡ್ಯ: ಜಿಲ್ಲೆಯಲ್ಲಿ ಜೂ.26ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ತಡೆ ದಿನದ ಅಂಗವಾಗಿ ಮಾದಕ, ಮದ್ಯ ಮತ್ತು ತಂಬಾಕಿನ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಜೂ.26 ರಂದು ತಮ್ಮ ವ್ಯಾಪ್ತಿಯಲ್ಲಿ ಮಾದಕ, ಮದ್ಯ ಮತ್ತು ತಂಬಾಕಿನ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಮಾದಕ ವಸ್ತುಗಳ ಸೇವನೆಯ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕಾಲೇಜಿಗೆ ಮಾದಕ ವಸ್ತುಗಳ ರವಾನೆಯಾಗುತ್ತಿದೆಯೇ ಎಂದು ಗಮನವಹಿಸಿ. ಕಾಲೇಜಿನ ಹತ್ತಿರದ ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟವಾಗುತ್ತಿದೆಯೇ ಎಂದು ಗಂಭೀರವಾಗಿ ಪರಿಶೀಲಿಸಿ. ಅರಣ್ಯಗಳಲ್ಲಿ ಮಾದಕ ಪದಾರ್ಥಗಳನ್ನು ಅಕ್ರಮವಾಗಿ ಬೆಳೆಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಅರಣ್ಯ ಇಲಾಖೆಯವರು ಸಂಶಯಾಸ್ಪದವಾಗಿ ಮಾದಕ ವಸ್ತುಗಳನ್ನು ಬೆಳೆಸುವುದು ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.
ಕೆಲವೊಂದು ಬೆಳೆಗಳ ಜತೆಗೆ ಮಾದಕ ವಸ್ತುಗಳನ್ನು ಬೆಳೆಯುವ ಸಾಧ್ಯತೆಯಿರುವ ಕಾರಣ ತೋಟಗಾರಿಕೆ ಇಲಾಖೆಯವರು ನಿಗಾವಹಿಸಿ. ರೈತರಲ್ಲಿ ಮಾದಕ ವಸ್ತುಗಳಿಂದ ಉಂಟಾಗುವ ಅಪಾಯದ ಬಗ್ಗೆ ಅರಿವು ಮೂಡಿಸಿ. ಇತ್ತೀಚಿಗೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ 12 ಕೆಜಿ ಗಾಂಜಾ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ. ಇದನ್ನು ಪ್ರೋತ್ಸಾಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಶಾಲಾ ಕಾಲೇಜಿನ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು, ಮದ್ಯ ಹಾಗೂ ತಂಬಾಕು ವ್ಯಾಪಾರಾಗುತ್ತಿಯೇ ಎಂದು ಶಿಕ್ಷಣ ಇಲಾಖೆಯವರು ಪರಿಶೀಲಿಸಿ ವರದಿ ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳು, ಮದ್ಯ ಹಾಗೂ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶವಿದೆ. ಆದ್ದರಿಂದ ಜಿಲ್ಲೆಯ ಪ್ರತಿ ಶಾಲಾ, ಕಾಲೇಜುಗಳಲ್ಲಿ ನಿರ್ದೇಶಕಯ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚೆಲುವಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಮೇಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.