ನಾರಾಯಣಪುರ ಜಲಾಶಯದಲ್ಲಿ ತಗ್ಗಿದ ಒಳಹರಿವು

Dvd Dam inflow
ದೇವದುರ್ಗ ತಾಲೂಕು ಹೂವಿನಹೆಡಗಿಯಲ್ಲಿ ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದ ಗೋಪುರ ಕಾಣಿಸುತ್ತಿರುವುದು.
Published on

ದೇವದುರ್ಗ: ಕೃಷ್ಣಾ ನದಿ ಮೇಲ್ದಂಡೆಯಲ್ಲಿ ಮಳೆ ತಗ್ಗಿದ್ದರಿಂದ ನಾರಾಯಣಪುರ ಜಲಾಶಯದಲ್ಲಿ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಕೃಷ್ಣಾ ನದಿಗೆ ಹರಿಸುವ ನೀರಿನ ಪ್ರಮಾಣ ತಗ್ಗಿಸಲಾಗಿದೆ.

ಜಲಾಶಯದಲ್ಲಿ ಶನಿವಾರ ಬೆಳಗ್ಗೆ ಒಳಹರಿವು 80 ಸಾವಿರದಿಂದ 60 ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೀಗಾಗಿ 13 ಕ್ರಸ್ಟ್ ಗೇಟ್‌ಗಳ ಮೂಲಕ 46,256 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 33.31ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 27.015 ಟಿಎಂಸಿ ಅಡಿ ನೀರಿದೆ.

ಕಳೆದ ಒಂದು ವಾರದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು. ಸದ್ಯ ನೀರಿನ ಒಳಹರಿವು ಕಡಿಮೆಯಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ನೆಮ್ಮದಿ ನೆಲೆಸಿದೆ.

ಡ್ಯಾಂನಿಂದ ನದಿಗೆ ಹರಿಸುವ ನೀರಿನ ಪ್ರಮಾಣ ತಗ್ಗಿದ್ದರಿಂದ ಸುಮಾರು 15ದಿನಗಳಿಂದ ಸಂಪೂರ್ಣವಾಗಿ ಮುಳುಗಡೆಯಾಗಿದ್ದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದ ಗೋಪುರ ಸದ್ಯ ಗೋಚರಿಸುತ್ತಿದೆ.

ಅಲ್ಲದೆ ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ಸಮೀಪದ ಬಂದಿದ್ದ ನೀರು ಇಳಿಕೆಯಾಗಿದೆ. ಗೂಗಲ್ ಅಲ್ಲಮಪ್ರಭು ದೇವಸ್ಥಾನದ ಮೆಟ್ಟಿಲುಗಳಲ್ಲೂ ನೀರು ತಗ್ಗಿದೆ. ಕಳೆದ ಒಂದು ವಾರದಿಂದ ನೆರೆ ಆತಂಕದಲ್ಲಿ ಕಾಲಕಳೆಯುತ್ತಿದ್ದ ನದಿದಂಡೆ ರೈತರು, ಗ್ರಾಮಸ್ಥರು ನಿರಾಳರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net