ದಲಿತರ ಪ್ರೇರಣಾಶಕ್ತಿ ನಾರಾಯಣಗುರು

mysore
Published on

ಮೈಸೂರು: ಶ್ರೇಷ್ಠ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಅವರು ಮನುಕುಲ ಮತ್ತ ಶ್ರೂದರ ಪ್ರೇರಣಾಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣಿಸಿದರು.


ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರಲ್ಲಿ ಶನಿವಾರ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಕ್ಷಣದ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆದು ನಾವು ಸಮಾನತೆಯ ಜೀವನ ನಡೆಸಿ ನಮ್ಮ ಹಕ್ಕುಗಳನ್ನು ಪಡೆಯಲು ನೆರವಾದ ನಾರಾಯಣಗುರುಗಳು ಪ್ರೇರಣಾ ಶಕ್ತಿಯಾಗಬೇಕೆ ಹೊರತು ಪೂಜಾ ಶಕ್ತಿಯಾಗಬಾರದು. ತುಳಿತಕ್ಕೊಳಗಾದ ಸಮುದಾಯಗಳು ಸಂಘಟನಾತ್ಮಕ ಹೋರಾಟಕ್ಕೆ ಅಣಿಯಾಗಬೇಕು. ಜಾತಿ ಸಂಕೋಲೆಗಳಿಂದ ಬಿಡುಗಡೆಯಾಗಿ ಸಮಾನತೆ, ಸಮಾನ ಅವಕಾಶಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು.


ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದವರು ನಾರಾಯಣ ಗುರುಗಳು. ತಮ್ಮ ಸೈದ್ಧಾಂತಿಕ ನಿಲುವುಗಳ ಮೂಲಕ ಅನಿಷ್ಟ ಪದ್ಧತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ಇವರು, ಜಾತಿಯ ಕಾರಣಕ್ಕೆ ನಿರ್ಲಕ್ಷೃ ಹಾಗೂ ನಿರ್ದಾಕ್ಷಣ್ಯಕ್ಕೆ ಒಳಗಾದವರ ಪರವಾಗಿ ದನಿ ಎತ್ತಿ ಶ್ರೇಷ್ಠ ಚಿಂತಕರು ಎಂದು ಹೇಳಿದರು.


ಅಂದಿನ ಕಾಲದಲ್ಲಿ ಹಿಂದು ಧರ್ಮದಲ್ಲಿನ ಮನುವಾದವು ತಳಸ್ತರದ ಜನರನ್ನು ಸೇವೆ ಮಾಡಲೆಂದೇ ಪರಿಗಣಿಸಲಾಗಿತ್ತು. ನಾರಾಯಣ ಗುರುಗಳ ಈ ಅನಿಷ್ಟತೆಗಳ ವಿರುದ್ಧ ಪ್ರತಿಭಟಿಸಿದರು. ಅವರ ಹೋರಾಟದ ಪರಿಣಾಮ ಎಲ್ಲರೂ ಪ್ರಯೋಜನೆ ಪಡೆದಿದ್ದಾರೆ ಎಂದರು.


ಶಿಕ್ಷಣ ನಮ್ಮ ಪ್ರಗತಿಗೆ ದಾರಿ ಎಂದ ಅವರು, ಶಾಲಾ ಹಾಗೂ ಕಾಲೇಜುಗಳನ್ನು ತೆರೆದರು. ಶಿಕ್ಷಣದಿಂದ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಶ್ರಮಿಸಿದರು. ಪ್ರಸ್ತುತ ಕೇರಳ ರಾಜ್ಯವು ಶಿಕ್ಷಣದಲ್ಲಿ ಶೇ.ನೂರರಷ್ಟು ಸಾಧನೆ ಮಾಡಲು ನಾರಾಯಣ ಗುರು ಅವರು ಕಾರಣರಾಗಿದ್ದಾರೆ. ಶೋಷಿತರು ಶಿಕ್ಷಣ ಪಡೆಯುವ ಮೂಲಕ ಸಮಾನತೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.


ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಶೂದ್ರರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳು ಪ್ರತ್ಯೇಕ ದೇವಸ್ಥಾನ ನಿರ್ಮಿಸಿದರು. ಅಸ್ಪಶ್ಯತೆಗೆ ಬೇಸತ್ತು ಕೆಲವರು ಅನ್ಯಧರ್ಮಗಳಿಗೆ ಮತಾಂತರವಾಗುತ್ತಿದ್ದ ಕಾಲಘಟ್ಟದಲ್ಲಿ ಹಿಂದು ಧರ್ಮದಲ್ಲಿ ಇದ್ದು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದರು ಎಂದು ತಿಳಿಸಿದರು.


ಪೊಲೀಸ್ ಇಲಾಖೆಯ ನಿವೃತ್ತ ಉಪ ಆಯುಕ್ತ ಬಿ.ಕೆ.ಶಿವರಾಮು ಮಾತನಾಡಿದರು. ಈಡಿಗ ಸಮಾಜಕ್ಕೆ ಮೈಸೂರಿನಲ್ಲಿ ಸಿಎ ನಿವೇಶನ ಮಂಜೂರು ಮಾಡಬೇಕು. ಈಡಿಗ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ, ಸನ್ಮಾನಿಸಲಾಯಿತು.


ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ಯಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಜಿಲ್ಲಾಧ್ಯಕ್ಷ ಪೋತರಾಜು, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net