

ಮೈಸೂರು: ರಾಜ್ಯ ಸರ್ಕಾರದ ಉಚಿತ ಕೊಡುಗೆಗಳನ್ನು ಟೀಕಿಸಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ವಿರುದ್ಧ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಡವರ ಕಷ್ಟ ನಿವಾರಣೆಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ನಾರಾಯಣಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ. ಹೀಗಾಗಿ ಉಚಿತ ಕೊಡುಗೆಗಳನ್ನು ನೀಡದಂತೆ ಹೇಳಿದ್ದಾರೆ. ಇದು ಸಾಮಾಜಿಕ ನ್ಯಾಯ, ಸಮಾನತೆ, ಬಡತನ ನಿರ್ಮೂಲನೆಗೆ ವಿರುದ್ಧವಾಗಿದೆ ಎಂದು ತಿರುಗೇಟು ನೀಡಿದರು.
ಬಡವರಿಗೆ ನೀಡುವ ಉಚಿತ ಯೋಜನೆಗಳ ಬಗ್ಗೆ ಮಾತನಾಡುವ ನಾರಾಯಣಮೂರ್ತಿ ಅವರು ಕಾರ್ಪೋರೇಟ್ ಸಂಸ್ಥೆಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಏಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ನರೆಂದ್ರ ಮೋದಿ ಅವರು ಕೆಲವೇ ಕೈಗಾರಿಕೋದ್ಯಮಗಳ ಸಾಲವನ್ನು ಮನ್ನಾ ಮಾಡಿದ ಸಂದರ್ಭದಲ್ಲಿ ನಾರಾಯಣಮೂರ್ತಿ ಈ ಹೇಳಿಕೆ ನೀಡಬೇಕಿತ್ತು. ಸಾಲ ಮನ್ನಾ ಹಣವನ್ನು ದೇಶದ ಅಭಿವೃದ್ಧಿಗೆ ಹಾಗೂ ವ್ಯವಸಾಯಕ್ಕೆ ಬಳಸಿ, ದೇಶದ ಬಡತನ ನಿವಾರಣೆಗೊಳಿಸಿ, ಸಮಸಮಾಜ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದ್ದರೆ ಶ್ಲಾಘಿಸಿ ಅವರು ದೇಶದ ಸಂವಿಧಾನದ ಆಶಯಕ್ಕೆ ಅನುಗುಣವಾಗಿದ್ದಾರೆ ಎನ್ನಬಹುದಿತ್ತು. ಆದರೆ, ಬಡವರ ಏಳಿಗೆಯ ಪರವಾಗಿರುವ ಸೌಲಭ್ಯಗಳನ್ನು ಅಣಕಿಸುವುದು, ಆಕ್ಷೇಪಿಸುವುದು ಸರಿಯಲ್ಲ ಎಂದರು.
ಸರ್ಕಾರದಿಂದ ಜನರಿಗೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂಬ ಮನೋಪ್ರವೃತ್ತಿಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವುದು ಸಂವಿಧಾನದ ಮೂಲ ಉದ್ದೇಶ. ಸಮಸಮಾಜದ ನಿರ್ಮಾಣವೇ ಅದರ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.