

ಚಿತ್ರದುರ್ಗ: ಕೇರಳದ ಬಸವಣ್ಣ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟ ಮಹಾನ್ ಸಂತ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ನಗರದ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಒಂದೇ ಜಾತಿ, ಮತ, ದೇವರೆಂಬ ನಾರಾಯಣಗುರುಗಳ ಮಾತನ್ನು ನಾವೆಲ್ಲರೂ ಪಾಲಿಸಬೇಕಿದೆ. ಶೋಷಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಹೆಣ್ಣು ಮಕ್ಕಳಿಗೆ ವಿಧಿಸಿದ್ದ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿದ್ದ ನಾರಾಯಣ ಗುರುಗಳು, ಮಾನವ ಕುಲ ಒಂದೇ ಎಂಬ ಸಿದ್ಧಾಂತವನ್ನು ಸಮಾಜಕ್ಕೆ ನೀಡಿದರು. ಇಂತಹ ಮಹನೀಯರ ವಿಚಾರಧಾರೆಗಳನ್ನು ಪಠ್ಯದಲ್ಲಿ ಅಳವಡಿಸಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕಿದೆ. ಅವರು ಮೌನಕ್ರಾಂತಿಯ ಮೂಲಕ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ನಾರಾಯಣ ಗುರುಗಳು ಯೋಗ, ಜ್ಞಾನ, ಮಾನವೀಯತೆ ಮೇರು ವ್ಯಕ್ತಿತ್ವದವರು. ಸಾಮಾನ್ಯ ಮನುಷ್ಯರಾಗಿ ಜನ್ಮತಾಳಿ, ಸಂತ ಪದವಿಗೇರಿದವರು. ಅವರ ತತ್ವಾದರ್ಶ, ವಿಚಾರಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೂ ತಿಳಿಸಬೇಕು ಎಂದರು.
ಉಪನ್ಯಾಸ ನೀಡಿದ ಎಸ್‌ಆರ್‌ಎಸ್ ಪಿಯು ಕಾಲೇಜು ಪ್ರಾಂಶುಪಾಲ ಇ.ಗಂಗಾಧರ್, ನಾರಾಯಣಗುರುಗಳು ಸಾಮಾಜಿಕ ಕಾಳಜಿಯುಳ್ಳವರಾಗಿದ್ದವರು. ತಾರತಮ್ಯ ನೀತಿ, ಮೂಢನಂಬಿಕೆ, ಅಸಮಾನತೆ ಮೊದಲಾದ ಸಾಮಾಜಿಕ ಪಿಡುಗಗಳ ವಿರುದ್ಧ ಧ್ವನಿ ಎತ್ತಿದ್ದರು. ಶೋಷಣೆ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದ್ದರು ಎಂದು ತಿಳಿಸಿದರು.
ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿನಿ ಆರ್.ದಿಶಾ ಅವರನ್ನು ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಎಚ್. ಜೀವನ್, ಕಾರ‌್ಯದರ್ಶಿ ಟಿ.ಮಂಜುನಾಥ್, ತಾಲೂಕು ಅಧ್ಯಕ್ಷರಾದ ಆರ್.ಶ್ರೀನಿವಾಸ್, ರವಿಕುಮಾರ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ವೆಂಕಟೇಶ್ ಇತರರಿದ್ದರು.