

ಮಂಡ್ಯ: ಯಾವುದೇ ರೀತಿಯ ಕ್ರಾಂತಿ ಮಾಡದೆ ಸಮಾಜಕ್ಕೆ ತಮ್ಮದೇ ಆದ ತತ್ವ ಆದರ್ಶಗಳ ಮೂಲಕ ಅನೇಕ ಕೊಡುಗೆ ಕೊಟ್ಟವರು ದಾರ್ಶನಿಕ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಈಡಿಗರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನಾರಾಯಣಗುರುಗಳು ಪ್ರತಿಯೊಬ್ಬರೂ ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಬೇಕೆಂದು ಪ್ರತಿಪಾದಿಸಿದರು. ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವ ಮತ್ತು ಆದರ್ಶ ಸಮಾಜಕ್ಕೆ ಪ್ರಸ್ತುತ ಸಮಾಜದಲ್ಲಿ ಅವಶ್ಯಕವಾಗಿದೆ. ಕೇವಲ ಒಂದು ದಿನಕ್ಕೆ ಅವರ ಜಯಂತಿ ಸಿಮೀತವಾಗಬಾರದು ಬದಲಾಗಿ ನಮ್ಮ ವೈಯಕ್ತಿಕ ಜೀವನದಲ್ಲಿ ಅವರ ಭೋಧನೆ, ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಹಿಂದಿನ ಕಾಲದಲ್ಲಿ ಅಸ್ಪೃಶ್ಯತೆ, ಮೇಲು- ಕೀಳು ಎಂಬ ಮನೋಭಾವನೆ ಇರುವ ವರ್ಗದ ವಿರುದ್ಧ ಪ್ರತಿಭಟಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಸಂತ ಎಂದು ಬಣ್ಣಿಸಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಸಹಕಾರ್ಯದರ್ಶಿ ಮಾದೇವ ಮಾತನಾಡಿ, ವಿಗ್ರಹಗಳ ಪೂಜೆ ನಿರಾಕರಿಸಿ ಮಾನವರಲ್ಲಿ ದೇವರನ್ನು ಕಂಡವರು ನಾರಾಯಣಗುರುಗಳು. ಹಲವು ಸಾಮಾಜಿಕ ಚಳವಳಿ ನಡೆಸಿ ಮನುಕುಲದ ಒಳಿತಿಗಾಗಿ ಶ್ರಮಿಸಿದವರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್, ಮುಖಂಡ ವೆಂಕಟಗಿರಿಯಯ್ಯ ಇತರರಿದ್ದರು.