ಆರ್ಯ ಈಡಿಗರ ಭವನಕ್ಕೆ ಅನುದಾನ: ಶಾಸಕ ರವಿಕುಮಾರ್ ಗಣಿಗ ಭರವಸೆ

1 (2)
Published on

ಮಂಡ್ಯ: ಜಿಲ್ಲೆಯಲ್ಲಿ ಆರ್ಯ ಈಡಿಗರ ಭವನ ನಿರ್ಮಾಣ ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಆಗ ಮಾತ್ರ ಹಲವಾರು ಮಹನೀಯರ ಜಯಂತಿ ಆಚರಣೆಗಳಿಗೂ ಅರ್ಥ ಬರುತ್ತದೆ ಎಂದರು.

ನಾರಾಯಣ ಗುರು ಅವರು ಡಾ.ಬಿ.ಆರ್.ಅಂಬೇಡ್ಕರ್, ನೆಲ್ಸನ್ ಮಂಡೇಲ ಸಮಕಾಲೀನವರಾಗಿ ಕ್ರಾಂತಿಯನ್ನುಂಟು ಮಾಡಿದವರು. ಅವರು ಸಮಾಜದ ಆಸ್ತಿ. ಅಂದು ಕೇರಳದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರಿಂದಲೇ ಇಂದು ಕೇರಳ ಸಾಕ್ಷರತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇನ್ನು ಕಾವೇರಿ ನೀರು ವಿಚಾರದಲ್ಲಿ ತ.ನಾಡು ವಿರುದ್ಧ ಹೋರಾಡಿದ ಬಂಗಾರಪ್ಪ ಅವರನ್ನು ನಾವು ಇಂದು ನೆನೆಯುವುದು ಅಗತ್ಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಅದ್ವೈತದ ಸಾರದಲ್ಲಿ ತಮ್ಮ ದಾರ್ಶನಿಕತೆಯನ್ನು ಪ್ರತಿಪಾದಿಸಿದ ನಾರಾಯಣ ಗುರು ಅವರು ಎಲ್ಲರನ್ನೂ ಒಂದಾಗಿ ಕಂಡರು. ಇರುವವನು ಒಬ್ಬನೇ ಪರಮಾತ್ಮ, ಒಂದೇ ತತ್ವ, ಒಂದೇ ಸತ್ಯ. ಎಲ್ಲವೂ ಒಂದೇ ಅಂದ ಮೇಲೆ ಭೇದ-ಭಾವವಿಲ್ಲ, ಮೇಲು ಕೀಳಿಲ್ಲ. ಎಲ್ಲರಲ್ಲಿರುವ ಪರಮಾತ್ಮ ಒಬ್ಬನೆಂದು ಪ್ರತಿಪಾದಿಸಿದರು ಎಂದು ಹೇಳಿದರು.

ಮಾನವೀಯತೆ ಮಲಗಿ, ಮೂಢನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್ ಮಾನವತಾವಾದಿಯಾಗಿ ಸಮಾಜದ ಕಣ್ಣು ತೆರೆಸಿದ ದಾರ್ಶನಿಕ ನಾರಾಯಣ ಗುರು. ವ್ಯಕ್ತಿ ಸತ್ತರೂ ಅವರು ಸಮಾಜಕ್ಕೆ ಸಾರಿದ ಸಾಮಾಜಿಕ ಹಾಗೂ ಮನವೀಯ ಮೌಲ್ಯಗಳು ಸಾಯಬಾರದು. ಅದು ಎಂದೆಂದಿಗೂ ಜೀವಂತ. ಇದು ನಾರಾಯಣ ಗುರು ಚಿಂತನೆಯಾಗಿತ್ತು. ಮೂಢನಂಬಿಕೆ, ಜಾತೀಯತೆ, ಅಸ್ಪಶ್ಯತೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಆಚರಣೆಯನ್ನು ಹಿಮ್ಮೆಟ್ಟಿಸುವ ಕ್ರಾಂತಿ ಮಾಡಿದರು ಎಂದು ವಿವರಿಸಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಯೋಗಗುರು ವೆಂಕಟೇಶ್ ಮಾತನಾಡಿದರು. ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ನಗರಸಭಾ ಸದಸ್ಯರಾದ ಎಂ.ಪಿ.ಅರುಣ್‌ಕುಮಾರ್, ಶ್ರೀಧರ್, ಶಿವಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net