

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸೆ.3ರಂದು ಗುರು ಸಂದೇಶ ಸಾಮರಸ್ಯ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರವಿಣ್ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಬನ್ನಂಜೆ ಬಿಲ್ಲವರ ಸೇವಾ ಸಂ ಮುಂಭಾಗ ಜಾಥಕ್ಕೆ ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವಿಠಲ ಪೂಜಾರಿ, ಸಮಾಜ ಸೇವಕರಾದ ಆನಂದಿ, ಈಶ್ವರ ಮಲ್ಪೆ, ಸತೀಶ್ ಸುವರ್ಣ ಅತಿಥಿಗಣ್ಯರೊಂದಿಗೆ ಚಾಲನೆ ನೀಡಲಿದ್ದಾರೆ. ಜಾಥಾವು ಬನ್ನಂಜೆ ಬಿಲ್ಲವ ಸೇವಾ ಸಂಘದಿಂದ ಹೊರಟು - ಕಲ್ಸಂಕ ಮಾರ್ಗವಾಗಿ ಅಂಬಾಗಿಲು-ಸಂತೆಕಟ್ಟೆ ಮಾರ್ಗವಾಗಿ ನೇಜಾರು, ಕೆಮ್ಮಣ್ಣು, ಹೂಡೆ, ಗುಜ್ಜರಬೆಟ್ಟು , ವಡಭಾಂಡೇಶ್ವರ, ಮಲ್ಪೆ, ಕಲ್ಮಾಡಿ, ಕಿದಿಯೂರು, ಕಡೆಕಾರ್, ಕುತ್ಪಾಡಿ, ಸಂಪಿಗೆನಗರ, ಉದ್ಯಾವರ ಮೂಲಕ ಸಾಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ತಲುಪಿ ಗುರು ಪೂಜೆಯೊಂದಿಗೆ ಸಮಾಪನೆಗೊಳ್ಳಲಿದೆ ಎಂದರು. ವೇದಿಕೆ ಕಾರ್ಯದರ್ಶಿ ವಿಶು ಕುಮಾರ್, ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಮಹೇಶ್ ಕುಮಾರ್, ಅನಿಲ್ ಕುಮಾರ್, ಶರತ್ ಜತ್ತನ್ನ ಉಪಸ್ಥಿತರಿದ್ದರು.