ಮಕ್ಕಳಲ್ಲಿ ಲೋಕಜ್ಞಾನದ ಅರಿವು ಅಗತ್ಯ

udp-25-jatha
Published on

ಉಡುಪಿ: ಧರ್ಮದ ಹೆಸರಿನಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ನಾರಾಯಣ ಗುರುಗಳು ಧರ್ಮವನ್ನು ಬಿಡದೆ ದೇವಸ್ಥಾನ, ಮಂದಿರ ಸ್ಥಾಪನೆ ಮಾಡಿದ್ದಾರೆ. ಧರ್ಮ, ಜಾತಿ ಹಂಗಿಲ್ಲದೆ ಎಲ್ಲರೂ ಒಂದಾಗುವ ಆವಶ್ಯಕತೆಯಿದೆ. ಗುರುಮಂದಿರಗಳ ಪಕ್ಕದಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ಮಕ್ಕಳಿಗೆ ಲೋಕಜ್ಞಾನದ ಅರಿವು ಮೂಡಿಸಬೇಕು ಎಂದು ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್​ ಹೇಳಿದರು.

ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ಬನ್ನಂಜೆಯ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಗುರು ಸಂದೇಶ ಸಾಮರಸ್ಯ ಜಾಥಾ ಸಮಾರೋಪದಲ್ಲಿ ಅವರು ಮಾತನಾಡಿದರು. ಶಿಕ್ಷಣದ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ನಾರಾಯಣಗುರುಗಳ ಶ್ರಮ ಅಪಾರವಾಗಿದೆ. ಮಹಾತ್ಮಾಗಾಂಧೀಜಿಯವರಿಗೂಗುರುಗಳು ಪ್ರೇರಣೆಯಾಗಿದ್ದರು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ನಮಗೆ ಆದರ್ಶ. ರಕ್ತಕ್ರಾಂತಿ ಇಲ್ಲದೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದಾರೆ. ನಾರಾಯಣ ಗುರುಗಳ ಸಂದೇಶವನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವಿಣ್​ ಎಂ.ಪೂಜಾರಿ ಪ್ರಸ್ತಾವನೆಗೈದು, ನಾರಾಯಣ ಗುರು ನಿಗಮ ಈಗಾಗಲೇ ಸ್ಥಾಪನೆಯಾಗಿದ್ದು, ಅದಕ್ಕೆ ಬಜೆಟ್​ನಲ್ಲಿ 500 ಕೋಟಿ ರೂ.ಮೀಸಲಿರಿಸಬೇಕು. ಗರೋಡಿಯ ಪೂಜಾರಿಗಳಿಗೆ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ವಿನಯ ಕುಮಾರ್​ ಸೊರಕೆ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್​ ಆರ್​.ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್​.ಶಂಕರ ಪೂಜಾರಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ್​ ಸನಿಲ್​, ಬನ್ನಂಜೆ ಬಿಲ್ಲವರ ಸೇವಾ ಸಂದ ಅಧ್ಯಕ್ಷ ಮಾಧವ ಬನ್ನಂಜೆ, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ.ಸುವರ್ಣ, ನ್ಯೂರೋ ಸರ್ಜನ್​ ಡಾ. ವಿನೋದ್​ ಕುಮಾರ್​, ಸೂರತ್​ನ ಓಪುಲ ಸಾಫ್ಟ್​ವೇರ್​ನ ಸಿಇಓ ಸುಭಾಸ್​ ಸಾಲ್ಯಾನ್​, ಉಡುಪಿ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಟ್​ ಮಣಿಪಾಲದ ಆಡಳಿತಾಧಿಕಾರಿ ಶಿನೋದ್​ ಟಿ.ಆರ್​., ತೋನ್ಸೆ ಗರಡಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ದಿನೇಶ್​ ಜತ್ತನ್​, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಯುವವೇದಿಕೆಯ ಉಪಾಧ್ಯಕ್ಷ ಮಹೇಶ್​ ಸ್ವಾಗತಿಸಿ, ದಯಾನಂದ ಉಗ್ಗೆಲ್​ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಜಾಥಾಕ್ಕೆ ಚಾಲನೆ
ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ 'ಗುರು ಸಂದೇಶದ ಸಾಮರಸ್ಯ ಜಾಥಾ'ಕ್ಕೆ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಶಾಸಕ ಯಶ್ಪಾಲ್​ ಎ.ಸುವರ್ಣ ಚಾಲನೆ ನೀಡಿದರು. ಮಾಜಿ ಶಾಸಕ ಕೆ.ರಘುಪತಿ ಭಟ್​ , ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಮಾಜಸೇವಕ ನಿತ್ಯಾನಂದ ಒಳಕಾಡು, ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವಿಣ್​ ಎಂ.ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.
ಜಾಥಾವು ಬನ್ನಂಜೆಯಿಂದ ಉಡುಪಿ ಸಿಟಿ ಬಸ್​ ನಿಲ್ದಾಣ, ಕೋರ್ಟ್​ ರೋಡ್​, ಜೋಡುಕಟ್ಟೆ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್​, ಕರಾವಳಿ ಬೈಪಾಸ್​, ಅಂಬಾಗಿಲು, ಗುಂಡಿಬೈಲು, ಕಲ್ಸಂಕ ಮಾರ್ಗವಾಗಿ ಬನ್ನಂಜೆ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net