ಸಂಸ್ಕಾರ ಬುನಾದಿ ಹಾಕಿಕೊಟ್ಟ ನಾರಾಯಣಗುರು

ಸಂಸ್ಕಾರ ಬುನಾದಿ ಹಾಕಿಕೊಟ್ಟ ನಾರಾಯಣಗುರು
Published on

ಹಾಸನ: ಸಮಾಜದ ಪ್ರತಿಯೊಂದು ಸಮುದಾಯದಲ್ಲಿಯೂ ಸಂಸ್ಕಾರವಿದೆ. ಈ ಸಂಸ್ಕಾರದ ಬುನಾದಿಯನ್ನು ಹಾಕಿಕೊಟ್ಟವರು ನಾರಾಯಣಗುರು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾರಾಯಣಗುರು ಜಯಂತಿಯನ್ನು ವಿಶ್ವದಾದ್ಯಂತ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಾರಾಯಣಗುರುವಿನ ತತ್ವಗಳಲ್ಲಿ ನಿಷ್ಠೆ, ತ್ಯಾಗ ಮನೋಭಾವ ಇತ್ತು. ಇವು ಪ್ರತಿಯೊಬ್ಬರ ಜೀವನದಲ್ಲಿ ಬೇರೂರಬೇಕು ಎಂದರು.

ಭಾರತದ ಸಂಸ್ಕೃತಿ ಎಂದರೆ ಅದು ಸಂಸ್ಕಾರಾಧಾರಿತ. ಸಂಸ್ಕಾರದ ಪ್ರಾರಂಭವು ಮನೆಯ ಹೆಣ್ಣುಮಕ್ಕಳಿಂದಲೇ ಆಗುತ್ತದೆ. ಅವರಿಲ್ಲದೆ ಯಾವ ಆಚರಣೆಗಳೂ ನಡೆಯಲ್ಲ. ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿ ಎರಡೂ ಅಗತ್ಯ. ಇವುಗಳ ಸಮತೋಲನವೇ ನಿಜವಾದ ಸಂಸ್ಕೃತಿ ಎಂದರು.

ಸಮಾಜದಲ್ಲಿದ್ದ ಅನ್ಯಾಯ, ಅಸ್ಪಶ್ಯತೆ, ಅಂಕುಡೊಂಕುಗಳನ್ನು ಹೋಗಲಾಡಿಸಲು ನಾರಾಯಣಗುರು ಮುಂದಾದರು. ಅದೇ ದಾರಿಯಲ್ಲಿ ಜಗಜ್ಯೋತಿ ಬಸವೇಶ್ವರರು ಸಹ ಸಮಾಜಕ್ಕೆ ವಿಶ್ವಸಂದೇಶ ನೀಡಿದರು. ದಾಸ ಸಂಸ್ಕೃತಿ, ವಚನ ಸಂಸ್ಕೃತಿ ಸಮಾಜದಲ್ಲಿ ಜಾಗೃತಿ ಮೂಡಿಸಿದವು. ಇಂದಿನ ಜಾಗತಿಕ ಸ್ಥಿತಿಗತಿಗಳಲ್ಲಿ ಮನುಷ್ಯನಲ್ಲಿ ಮನುಷ್ಯತ್ವವೇ ಮಸುಕಾಗುತ್ತಿದೆ. ಸಂಕುಚಿತ ಮನೋಭಾವ, ಸ್ವಾರ್ಥ, ನಾನು ಮಾತ್ರ ಬದುಕಬೇಕು ಎಂಬ ದುರಾಸೆ ಮುಂದುವರಿದರೆ, ಗಾಂಧೀಜಿ ಕನಸಿನ ರಾಮರಾಜ್ಯ ಎಂದಿಗೂ ನನಸಾಗುವುದಿಲ್ಲ. ಇತರರಿಗೂ ಬದುಕುವ ದಾರಿಯನ್ನು ತೋರಿಸಿದ ಮಹಾನ್ ಸಂತರ ತತ್ವ-ಆದರ್ಶಗಳು ಇಂದಿಗೂ ಚಿರಪ್ರಸ್ತುತವಾಗಿವೆ. ಅಂತಹ ಮಹಾನ್ ಸಂತರ ಪೈಕಿ ನಾರಾಯಣಗುರು ಒಬ್ಬರು ಎಂದು ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಪಿ.ತಾರಾನಾಥ್, ತಾಲೂಕು ಆರ್ಯಈಡಿಗರ ಸಂಘದ ಅಧ್ಯಕ್ಷ ಬಿ.ಎನ್. ಮಹಂತೇಶ್, ಹೋಂಬೇಗೌಡ, ಮಲ್ಲೇಗೌಡ, ಮಹೇಶ್, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net