

ಮಂಡ್ಯ: ಬ್ರಹ್ಮಶ್ರೀ ನಾರಾಯಣ ಗುರು ಅವರು ಬಡತನ ಮತ್ತು ನೊಂದಿರುವ ಸಮುದಾಯವನ್ನು ಮೇಲೆತ್ತಲು ಹೋರಾಡಿದ ಮಹಾನ್ ನಾಯಕ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ನಾರಾಯಣಗುರು ಅವರು ಸಾಮಾಜಿಕ ನ್ಯಾಯದ ಬಗ್ಗೆ ಜನಸಮುದಾಯಕ್ಕೆ ತಿಳಿಸುವ ಮೂಲಕ ತಳಮಟ್ಟದಲ್ಲಿ ಮನುಷ್ಯ-ಮನುಷ್ಯರ ನಡುವೆ ಇರುವ ಭೇದಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದರು.
ಸಮಾಜದಲ್ಲಿ ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ಎಲ್ಲರೂ ಸಂತೋಷದಿಂದ ನೆಮ್ಮದಿಯಿಂದ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಜೀವನವನ್ನು ನಡೆಸಬೇಕು. ಪ್ರೀತಿಯಿಂದ ಇರುವಂತಹ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣ ಗುರು ಅವರ ಪಾತ್ರ ಅಪಾರ ಎಂದರು.
ಸಹಾಯಕ ಪ್ರಾಧ್ಯಾಪಕ ಲೋಕೇಶ್ ಮಾತನಾಡಿ, ನಾರಾಯಣಗುರು ಅವರು ಆಟ ಪಾಠ ಅಲ್ಲದೇ ಚಟುವಟಿಕೆಗಳಲ್ಲಿ ಚುರುಕಾಗಿದ್ದರು. ಶ್ಲೋಕಗಳನ್ನು ರಚಿಸುವುದು, ಹಾಡುವುದು ಅವರಿಗೆ ಪರಿಪಾಠವಾಗಿತ್ತು. ಕಂದಾಚಾರವನ್ನು ತೊಲಗಿಸಿ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರೂ ಬ್ರಹ್ಮತ್ವ, ಮೋಕ್ಷವನ್ನು ಪಡೆಯಲು, ಭಗವಂತನನ್ನು ಆರಾಧಿಸಲು, ಪೂಜಿಸಲು ಮುಕ್ತವಾದ ಅವಕಾಶ ಕಲ್ಪಿಸಲು ಕೇರಳದ ಭಾಗದಲ್ಲಿ ದೊಡ್ಡ ಚಳವಳಿಯನ್ನು ಹುಟ್ಟುಹಾಕಿ ದೇಶಕ್ಕೆ ಉತ್ತಮ ಮಾರ್ಗವನ್ನು ನೀಡಿದವರು ಎಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಮಾತನಾಡಿದರು. ನಗರಸಭೆ ಸದಸ್ಯ ಅರುಣ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಮುಖಂಡರಾದ ರಾಮಲಿಂಗಯ್ಯ, ಪುಟ್ಟಸ್ವಾಮಿ, ಬಿ.ಪಿ. ರಾಜಕುಮಾರ್, ದಾಸೇಗೌಡ, ಅರವಿಂದ್‌ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 122 ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.