ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಂತ ಶ್ರೀ ನಾರಾಯಣ ಗುರು : ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಣ್ಣನೆ

Narayana guru jayanthi
Published on

ಮೈಸೂರು: ದೇಶ ಸೇವೆಯೇ ಈಶ ಸೇವೆ ಎಂದು ನಂಬಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಂತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಣ್ಣಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸಮಿತಿ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು, ಅಂದು ಬಂಧನದಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನು ಬಿಡಿಸುವಲ್ಲಿ ನಾರಾಯಣ ಗುರುಗಳು ಪ್ರಮುಖ ಪಾತ್ರ ನಿರ್ವಹಿಸಿ ದರು. ಕೇರಳದಲ್ಲಿ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಕಾಲದಲ್ಲಿ ಅಸ್ಪಶ್ಯತೆ ಹೋಗಲಾಡಿಸಲು ನಾರಾಯಣ ಗುರುಗಳು ಸಾಕಷ್ಟು ಶ್ರಮಿಸಿದರು ಎಂದರು.

ಕೇರಳದಲ್ಲಿ ಈ ಹಿಂದೆ ಜಾತಿ ಹೆಸರಿನಲ್ಲಿ ಅಸ್ಪಶ್ಯ ಸಮುದಾಯವನ್ನು ಕೇವಲಾಗಿ ನಡೆಸಿಕೊಳ್ಳಲಾಗುತಿತ್ತು. ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವ್ಯವಸ್ಥೆಯ ವಿರುದ್ಧ ನಾರಾಯಣ ಗುರುಗಳು ಧ್ವನಿ ಎತ್ತಿದರು. ಅಸ್ಪಶ್ಯರಿಗೆ ದೇವಸ್ಥಾನ ಪ್ರವೇಶ ದೊರೆಯದೆ ಇದ್ದಾಗ ಅಸ್ಪಶ್ಯರಿಗೋಸ್ಕರ ಪ್ರತ್ಯೇಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು ಎಂದರು.

ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು, ಆರ್ಥಿಕವಾಗಿ ಎಲ್ಲರೂ ಸಬಲರಾಗಬೇಕು ಎಂಬುದು ನಾರಾಯಣ ಗುರುಗಳ ಆಶಯವಾಗಿತ್ತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಹ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಅಂಬೇಡ್ಕರ್ ಕರೆ ನೀಡಿದರು ಎಂದು ಹೇಳಿದರು.

ಮೇಯರ್ ಶಿವಕುಮಾರ್ ಮಾತನಾಡಿ, ಕೇರಳದಲ್ಲಿ ಈ ಹಿಂದೆ ಮಹಿಳೆಯರ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಕೆಳವರ್ಗದ ಜನರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶಗಳು ಇರಲಿಲ್ಲ. ಅಲ್ಲದೆ, ಶಿವ, ರಾಮ, ಕೃಷ್ಣ ದೇವರುಗಳನ್ನು ಪೂಜಿಸಲು ಅವಕಾಶ ಇರಲಿಲ್ಲ. ತಳಸಮುದಾಯದವರು ಮಾರಿ ಮುಂತಾದ ದೇವರನ್ನು ಮಾತ್ರ ಪೂಜಿಸಬೇಕಿತ್ತು. ಇಂತಹ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಾರಾಯಣ ಗುರುಗಳು ಶ್ರಮಿಸಿದರು ಎಂದು ಹೇಳಿದರು.

ಅಂದಿಗೆ ಕೇರಳದಲ್ಲಿ ನಾರಾಯಣ ಗುರುಗಳನ್ನು ಬಸವಣ್ಣ ಎನ್ನುತ್ತಿದ್ದರು. ನಾರಾಯಣ ಗುರುಗಳು ವಸುದೈವ ಕುಟುಂಬಕಂ ಆಶಯವನ್ನು ಹೊಂದಿದ್ದರು. ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿದಾಗ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸ್ವಾತಂತ್ರೃ ದೊರೆಯದಿದ್ದರೆ ದೇಶ ಸುರಕ್ಷಿತವಾಗಿ ಇರುವುದಿಲ್ಲ ಎಂದು ಹೇಳಿದ್ದರು. ಹಿಂದುಳಿದ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ನಾರಾಯಣ ಗುರುಗಳ ಪಾತ್ರ ಮಹತ್ವದ್ದು ಎಂದರು.

ನಿವೃತ್ತ ಪ್ರಾಧ್ಯಾಪಕ ಮಮತೇಶ್ ಕಡೂರ್ ಮಾತನಾಡಿ, ನಾಡಿನಾದ್ಯಂತ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ನಾರಾಯಣಗುರು ಜಯಂತಿ ಕೇವಲ ಜಿಲ್ಲಾ ಹಾಗೂ ತಾಲೂಕು ಮಟ್ಟಕ್ಕೆ ಮಾತ್ರ ಸೀಮಿತಗೊ ಳ್ಳದೆ ಶಾಲಾ, ಕಾಲೇಜುಗಳಿಗೂ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಉಪ ಮೇಯರ್ ಡಾ. ಜಿ . ರೂಪಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಹಿರಿಯ ರಂಗಕರ್ಮಿ ರಾಜಶೇಖರ್ ಕದಂಬ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ಕೆ. ಪೋತರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಕೃಷ್ಣಮೂರ್ತಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಮ್ಮ, ಯುವ ವೇದಿಕೆಯ ಅಧ್ಯಕ್ಷ ಸೋಮಶೇಖರ್, ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್, ವಿದ್ಯಾರ್ಥಿ ನಿಲಯದ ಅಧ್ಯಕ್ಷ ಶ್ರೀಕಾಂತ್, ಬಿಲ್ಲವ ಸಂಘದ ಕಾರ್ಯದರ್ಶಿ ಸದಾಶಿವ ಪೂಜಾರಿ, ಎಸ್‌ಎನ್‌ಡಿಪಿ ಕಾರ್ಯದರ್ಶಿ ಆನಂದ್, ನಾರಾಯಣಗುರು ಟ್ರಸ್ಟ್ ಕಾರ್ಯದರ್ಶಿ ಮನೋಜ್ ಕುಮಾರ್, ಮೈಸೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net