ನಾರಾಯಣ ಗುರು ನಿಗಮ ಸ್ಥಾಪನೆಗೆ ಕಾರ್ಯಯೋಜನೆ: ಸಚಿವ ಸುನೀಲ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಬನ್ನಂಜೆಯಲ್ಲಿ ರಾಜ್ಯ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿದರು.
udp-sunil
Published on

ಉಡುಪಿ: ಹಿಂದುಳಿದ ಸಮುದಾಯದ ಜನರನ್ನು ಆರ್ಥಿಕವಾಗಿ ಬಲಯುತಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಾರಾಯಣಗುರು ನಿಗಮ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ಶೀಘ್ರದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ನಿಗಮ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಮೀಸಲಾತಿ ಕೇಳಿಲ್ಲ
ಹಿಂದುಳಿದ ವರ್ಗಕ್ಕೆ ಶಾಲಾ ಕಾಲೇಜುಗಳಿಗೆ ಪ್ರವೇಶವಿಲ್ಲದ ಸಮಯದಲ್ಲಿ ಗುರುಗಳು ಶಿಕ್ಷಣದಲ್ಲಿ ಮೀಸಲಾತಿ ಬೇಕು ಎಂಬುದಾಗಿ ಹೋರಾಟ ಮಾಡದೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯಕ್ಕೆ ಅವಕಾಶ ಕಲ್ಪಿಸಿದ್ದರು. ಅದೇ ರೀತಿ ದೇವಸ್ಥಾನಕ್ಕೆ ಪ್ರವೇಶವಿಲ್ಲದವರಿಗಾಗಿ ತಾವೇ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಸಮಾಜದ ಪರಿವರ್ತನೆಗೆ ಇವೆಲ್ಲ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಹೇಳಿದರು.

ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಜರಾಯಿ ಇಲಾಖೆಯಲ್ಲಿ ಮಾನ್ಯತೆ ಪಡೆದ ದೇವಸ್ಥಾನಗಳ ಪಟ್ಟಿಯಲ್ಲಿ ನಾರಾಯಣ ಗುರು ಮಂದಿರಗಳನ್ನೂ ಸೇರಿಸಲಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಾಗಲಿದೆ. ಅಸ್ಪಶ್ಯತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ನಾರಾಯಣಗುರುಗಳು ರಕ್ತ ಕ್ರಾಂತಿಗೆ ಅವಕಾಶವಿಲ್ಲದೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಮಾಜದಲ್ಲಿ ಪರಿವರ್ತನೆ ತಂದು ಆದರ್ಶ ಪ್ರಾಯರಾಗಿದ್ದಾರೆ. ಕೇರಳದಲ್ಲಿ ಜನಿಸಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ದೇಶಾದ್ಯಂತ ಚಳುವಳಿಯ ಮೂಲಕ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿ ಹಾಗೂ ಕೊಡುಗೆಗಳನ್ನು ಪಠ್ಯಪುಸ್ತಕದಲ್ಲಿ ವಿಸ್ತೃತವಾಗಿ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಸಂಸ್ಕೃತಿ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರಲ್ಲಿ ವಿನಂತಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಪಂ ಸಿಇಒ ಡಾ. ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net