ಒಗ್ಗಟ್ಟಿನಿಂದ ಬದುಕುವುದೇ ನಮ್ಮ ಧ್ಯೇಯವಾಗಬೇಕು

07HDK04 NArayana GURU
Published on

ಎಚ್.ಡಿ. ಕೋಟೆ : ಧರ್ಮ ಎಂಬುದು ಮಾನವೀಯವಾಗಿರಬೇಕು ಎಂಬ ಧ್ಯೇಯದಿಂದ ಶೋಷಿತರನ್ನೂ ಅಪ್ಪಿಕೊಂಡ ಮಹಾನ್ ದಾರ್ಶನಿಕರು ನಾರಾಯಣ ಗುರುಗಳು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇರಳದಲ್ಲಿ ಜನಿಸಿ, ಕನ್ಯಾಕುಮಾರಿಯವರೆಗೂ ಸಂಚರಿಸಿ, ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಟ ಮಾಡಿ ಸಮಾನತೆಯನ್ನು ಸಾರಿದವರು ನಾರಾಯಣ ಗುರುಗಳು ಎಂದು ಸ್ಮರಿಸಿದರು. ಸಮಾಜದವರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಾಧಕರ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದವರು ಸಲಹೆ ನೀಡಿದರು.

ವಿವಿಧ ಸಮುದಾಯಗಳಿಗೆ ಸಹಕಾರ ನೀಡಲು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನ ಮಾಡುತ್ತೇನೆ. ಪಟ್ಟಣದ ಎಲ್ಲಮ್ಮತಾಯಿ ದೇವಸ್ಥಾನದ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವೆ ಎಂದು ಅನಿಲ್ ಚಿಕ್ಕಮಾದು ಹೇಳಿದರು.

ತಹಸೀಲ್ದಾರ್ ಶ್ರೀನಿವಾಸ ಮಾತನಾಡಿ, ಮಹನೀಯರ ಜಯಂತಿ ಆಚರಣೆ ಮಾಡುವುದರೊಂದಿಗೆ ಅವರ ವಿಚಾರಧಾರೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಅಸಮಾನತೆ ವಿರುದ್ಧ ಹೋರಾಟ ಮಾಡಿದ ನಾರಾಯಣ ಗುರುಗಳು ನಾಡಿಗೆ ನೀಡಿದ ಸಂದೇಶ ಪಾಲಿಸಿ, ಒಗ್ಗಟ್ಟಿನಿಂದ ದುಡಿಯಬೇಕು. ಸಾಧಕರ ತತ್ವ, ಸಿದ್ಧಾಂತ ಮತ್ತು ಚಿಂತನೆಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದರು. ತಾಪಂ ಇಒ ಧರಣೀಶ್, ಡಾ.ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಮುಖಂಡರಾದ ಮಳಲಿ ಶಾಂತ ಕುಮಾರ್, ಮುತ್ತುರಾಜ್, ಮಂಜುನಾಥ್, ಶಂಭುಲಿಂಗನಾಯಕ, ಅನಿಲ್, ರವಿ, ಸಂತೋಷ, ಉಮೇಶ್, ನಾಗನಹಳ್ಳಿ ರಾಜು, ವೇದ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net