

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ರಕ್ತದಲ್ಲಿ ಪತ್ರ ಬರೆಯುವ ಹೋರಾಟಕ್ಕೆ ಭಾನುವಾರ ಚಾಲನೆ ನೀಡಿದರು.
ಕಾವೇರಿಯ ವಿಚಾರವಾಗಿ ಸಂಕಷ್ಟ ಸೂತ್ರ ಜಾರಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರಧಾನಿಯವರಿಗೆ ರಕ್ತದಲ್ಲಿ ಪತ್ರ ಬರೆಯುವ ಹೋರಾಟಕ್ಕೆ ಗಾಂಧಿನಗರದ ಕರವೇ ಕಚೇರಿ ಮುಂಭಾಗ ಟಿ.ಎ.ನಾರಾಯಣಗೌಡ ಚಾಲನೆ ನೀಡಿದರು.
ಬೆಂಗಳೂರು ಸೇರಿದಂತೆ ರಾಜ್ಯದ ೩೧ ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆಯುವ ಹೋರಾಟ ಮಾಡಲಾಗಿದೆ. ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಪತ್ರ ಚಳವಳಿ ಹೋರಾಟ ಮಧ್ಯಾಹ್ನ ೩ ಗಂಟೆವರೆಗೆ ನಡೆಯಿತು. ಪತ್ರವನ್ನು ಪ್ರಧಾನ ಮಂತ್ರಿ ಕಾರ್ಯಭಾರದ ವಿಳಾಸಕ್ಕೆ ಪೋಸ್ಟ್ ಮಾಡಲಾಗಿದೆ.
೧ ಲಕ್ಷ ಪತ್ರ ಬರೆಯುವ ಗುರಿ
ರಾಜ್ಯಾದಾದ್ಯಂತ ಕರವೇ ಕಾರ್ಯಕರ್ತರು ೧ ಲಕ್ಷ ರಕ್ತದಲ್ಲಿ ಪತ್ರ ಬರೆಯುವ ಗುರಿಯನ್ನು ಹೊಂದಿದ್ದಾರೆ. ಇದಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಭಾನುವಾರ ಸುಮಾರು ೪೦ ಸಾವಿರ ಮಂದಿ ಪತ್ರ ಬರೆದಿದ್ದಾರೆ. ಇದರಲ್ಲಿ ಸಾರ್ವಜನಿಕರು ಕೂಡ ಸ್ವಯಂಪ್ರೇರಿತರಾಗಿ ಭಾಗವಹಿಸಬಹುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ:
ಕರ್ನಾಟಕದಲ್ಲಿ ತೀವ್ರ ತರವಾದ ಬರಗಾಲ ಇರುವುದರಿಂದ ಕಾವೇರಿ ಕಣಿವೆ ಭಾಗದ ರೈತರಿಗೆ ಮತ್ತು ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಹೀಗಾಗಿ ಕಾವೇರಿಯ ವಿಚಾರವಾಗಿ ಸಂಕಷ್ಟ ಸೂತ್ರ ಜಾರಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಬೇಕು. ಕಾವೇರಿ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಾಗುವುದು. ದೆಹಲಿಯ ಜಂತರ್ ಮಂತರ್ ಮುಂದೆ ಇದೇ ವಾರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.