ಸಚಿವ ನಾರಾಯಣ ಗೌಡ ಅವರಿಗೆ ಕಪ್ಪು ಬಾವುಟ ಪ್ರದರ್ಶನ

FLAG
Published on

ಶಿವಮೊಗ್ಗ: ಧ್ವಜಾರೋಹಣ ನೆರವೇರಿಸಿ ಕವಾಯತು ತುಕಡಿಗಳ ವೀಕ್ಷಣೆ ನಡೆಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರಿಗೆ ಮಾನವ ಹಕ್ಕುಗಳ ಹೋರಾಟ ವೇದಿಕೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ಶಿವಮೊಗ್ಗದ ಡಿಎಆರ್‌ನಲ್ಲಿ ನಡೆದಿದೆ.

ಸಾರ್ವಜನಿಕರ ನಡುವೆಯಿದ್ದ ಮಾನವ ಹಕ್ಕುಗಳ ಹೋರಾಟ ವೇದಿಕೆಯ 15ಕ್ಕೂ ಹೆಚ್ಚು ಕಾರ್ಯಕರ್ತರು, ವೇದಿಕೆ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭದ್ರಾವತಿ ಬಿಇಒ ಕಚೇರಿ ಪಕ್ಕದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಎರಡು ಕೋಟಿ ರೂ. ಬಿಡುಗಡೆಯಾಗಿದ್ದರೂ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಲ್ಲ. ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟ ವೇದಿಕೆ ಕಾರ್ಯಕರ್ತರು ದೂರಿದರು.

ಭದ್ರಾವತಿ ತಾಲೂಕು ರಂಗಾಪುರ ಸರ್ವೇ ನಂಬರ್ 1ರಲ್ಲಿ ಕಂದಾಯ ಜಮೀನು ಇದೆ. ಇಲ್ಲಿ ಸಾಗುವಳಿ ಮಾಡುತ್ತಿರುವ 24 ಜನರ ವಿರುದ್ಧ ಅರಣ್ಯ ಇಲಾಖೆಯವರು ಅತಿಕ್ರಮಣ ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ತಮ್ಮಡಿಯಲ್ಲಿ ಸ್ಮಶಾನಕ್ಕೆ ಜಿಲ್ಲಾಧಿಕಾರಿಗಳು ಜಾಗ ಗುರುತು ಮಾಡಿಲ್ಲ ಎಂದು ಆರೋಪಿಸಿದರು.

ಕಪ್ಪು ಬಾವುಟ ಪ್ರದರ್ಶಿಸಿದವರನ್ನು ದೊಡ್ಡಪೇಟೆ ಠಾಣೆಗೆ ಕರೆದೊಯ್ದು ಸಾರ್ವಜನಿಕ ಸಮಾರಂಭದಲ್ಲಿ ಗೊಂದಲ ಉಂಟು ಮಾಡಿದ್ದಾರೆ ಎಂದು ದೂರು ದಾಖಲಿಸಿಕೊಂಡು ಕೆಲ ಸಮಯದ ಬಳಿಕ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net