ನಾರಾಯಣಗೌಡ ಸೇರಿ 29 ಮಂದಿಗೆ ಜಾಮೀನು: ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯವಿಲ್ಲ

Narayana gowda
Published on

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಅಳವಡಿಕೆ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ೫ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಾರಾಯಣಗೌಡ ಮತ್ತು ಇತರೆ ೨೯ ಕಾರ್ಯಕರ್ತರಿಗೆ ಶನಿವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.


ನಾಮಫಲಕ ಧ್ವಂಸ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಕರವೇ ಬೆಂಗಳೂರು ನಗರದ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ, ಕಾರ್ಯಕರ್ತರಾದ ಶರತ್, ಲೋಕೇಶ್ ಗೌಡ, ಹೇಮಂತ್ ಅವರಿಗೆ ಇತ್ತೀಚೆಗೆ ಜಾಮೀನು ಮಂಜೂರಾಗಿ ಜೈಲಿನಿಂದ ಬಿಡುಗಡೆಯಾಗಿದ್ದರು.


ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯವಿಲ್ಲ:
ಹೋರಾಟ ನಡೆಸಿ ಬಂಧನವಾಗಿ ಜೈಲೂ ಸೇರಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯವಿಲ್ಲದಂತಾಗಿದೆ. ಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆದ್ದವು. ನಾರಾಯಣ ಗೌಡರ ಪರ ವಕೀಲರಾದ ಎಂ.ಜಿ.ಕುಮಾರ್ ವಾದ ಮಂಡಿಸಿದ್ದು, ಇದನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಆದೇಶ ಪ್ರಕಟಸಿದರು. ಆದೇಶ ಪ್ರತಿ ಸಿಕ್ಕ ನಂತರ ಟ್ರಯಲ್ ಕೋರ್ಟ್‌ನಲ್ಲಿ ಐಪಿಸಿ ೪೩೭ ರಡಿ ಅರ್ಜಿ ಸಲ್ಲಿಸಿ ಶ್ಯೂರಿಟಿ ಕೊಡಬೇಕು. ಆದರೆ ಕೆಲ ಡಕ್ಯೂಮೆಂಟ್ ಸಲ್ಲಿಕೆಯಲ್ಲಿ ತೊಡಕಾದ ಹಿನ್ನೆಲೆ ಜಾಮೀನು ಸಿಕ್ಕರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ. ಹಾಗಾಗಿ ಸೋಮವಾರದವರೆಗೂ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ೨೮ ಮಂದಿ ಕಾರ್ಯಕರ್ತರು ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ನಾರಾಯಣಗೌಡ ಅವರ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಕುಟುಂಬದವರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ನಿರಾಸೆಯಾಗಿದೆ.

ಬಿಗಿ ಬಂದೋಬಸ್ತ್ ಮಾಡಲಾಗಿತ್ತು:
ಕರವೇ ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರು ಶನಿವಾರ ಬಿಡುಗಡೆಯಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ನೇತೃತ್ವದಲ್ಲಿ ಇಬ್ಬರು ಎಸಿಪಿ, ನಾಲ್ವರು ಇನ್‌ಸ್ಪೆಕ್ಟರ್, ಹದಿನಾರು ಮಂದಿ ಸಬ್ ಇನ್‌ಸ್ಪೆಕ್ಟರ್, ನೂರಕ್ಕೂ ಹೆಚ್ಚು ಮಂದಿ ಪೊಲೀಸರ ನಿಯೋಜನೆ ಮಾಡಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಸರ್ಪಗಾವಲನ್ನು ಹಾಕಲಾಗಿತ್ತು. ಜೈಲಿನ ಅರ್ಧ ಕಿಲೋ ಮೀಟರ್ ರಸ್ತೆಯನ್ನ ಬ್ಲಾಕ್ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net